ಶಿರಸಿ: ರೈತರಿಗೆ ಸಮರ್ಪಕ ಕಾಲಾವಕಾಶ ಹಾಗೂ ಮಾಹಿತಿ ನೀಡದೆ ಮುಂಜಾನೆ ವೇಳೆಯಲ್ಲೇ ಅರಣ್ಯ ಇಲಾಖೆ ಅಧಿಕಾರಿಗಳು ಜೆಸಿಬಿ ಮತ್ತು ಪೊಲೀಸ್ ಬಂದೋಬಸ್ತ್‌ನೊಂದಿಗೆ ಆಗಮಿಸಿ ಜಮೀನು ವಶಪಡಿಸಿಕೊಂಡು ಗಿಡಗಳನ್ನು ನೆಡುವ ಕಾರ್ಯ ಕೈಗೊಂಡಿರುವುದು ಖಂಡನೀಯ ಎಂದು ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅನಂತಮೂರ್ತಿ ಹೆಗಡೆ ಆರೋಪಿಸಿದ್ದಾರೆ.

ಭಾನುವಾರ ಬೆಳಗ್ಗೆ ಗೋಳಿಕಟ್ಟಾ ಗ್ರಾಮದ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಅವರು, ಸ್ಥಳೀಯ ರೈತರೊಂದಿಗೆ ಚರ್ಚೆ ನಡೆಸಿದ ಬಳಿಕ ಮಾತನಾಡಿದರು.
ಗೋಳಿಕಟ್ಟಾ ಗ್ರಾಮದ ಕಾಮಧೇನು ಹಾಲು ಮತ್ತು ಹಣ್ಣು ಸಂಸ್ಕರಣಾ ಸಂಸ್ಥೆಗೆ ಸಂಬಂಧಿಸಿದ ಜಾಗದಲ್ಲಿ ಹಲವು ವರ್ಷಗಳಿಂದ ರೈತರು ಭತ್ತ, ಅನಾನಸ್ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯುತ್ತಾ ಜೀವನ ಸಾಗಿಸುತ್ತಿದ್ದಾರೆ. ಈ ರೈತರು ದೇಶದ ನಾಗರಿಕರಾಗಿದ್ದು, ಮತದಾನದ ಹಕ್ಕು ಹೊಂದಿದ್ದಾರೆ ಮತ್ತು ಸರ್ಕಾರಕ್ಕೆ ಕಂದಾಯ ಪಾವತಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಅವರ ಜಮೀನಿನ ವಿಚಾರದಲ್ಲಿ ಏಕಾಏಕಿ ಕಠಿಣ ಕ್ರಮ ಕೈಗೊಳ್ಳುತ್ತಿರುವುದು ಸರಿಯಲ್ಲ ಎಂದು ಹೆಗಡೆ ಅಸಮಾಧಾನ ವ್ಯಕ್ತಪಡಿಸಿದರು.
ಸಂಬಂಧಿಸಿದ ಜಮೀನಿನ ಕುರಿತು ನ್ಯಾಯಾಲಯ ನೀಡಿರುವ ಆದೇಶವನ್ನು ಗೌರವಿಸಬೇಕಾಗಿದೆ. ಆದರೆ ನ್ಯಾಯಾಲಯದ ಆದೇಶವನ್ನು ಅನುಷ್ಠಾನಗೊಳಿಸುವ ಸಂದರ್ಭದಲ್ಲೂ ಕಾನೂನುಬದ್ಧ ಪ್ರಕ್ರಿಯೆ ಮತ್ತು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಜಮೀನು ತೆರವುಗೊಳಿಸುವ ಮುನ್ನ ಸಂಬಂಧಪಟ್ಟವರಿಗೆ ಸೂಕ್ತ ಮಾಹಿತಿ ನೀಡಿ ಅಗತ್ಯ ಕಾಲಾವಕಾಶ ನೀಡಬೇಕಿತ್ತು ಎಂದು ಅವರು ಹೇಳಿದರು.

ರೈತರ ಹೇಳಿಕೆಯ ಪ್ರಕಾರ, ತಡರಾತ್ರಿ ಇಂಗ್ಲಿಷ್‌ನಲ್ಲಿರುವ ಸುಮಾರು 20 ಪುಟಗಳ ಆದೇಶದ ಪ್ರತಿಯನ್ನು ನೀಡಲಾಗಿದ್ದು, ಮರುದಿನ ಬೆಳಗ್ಗೆ ಸುಮಾರು 5 ಗಂಟೆಗೆ ಜೆಸಿಬಿ ಹಾಗೂ ಪೊಲೀಸ್ ಭದ್ರತೆಯೊಂದಿಗೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ. ಈ ರೀತಿಯ ಕಾರ್ಯಾಚರಣೆಯ ಅಗತ್ಯವೇನು ಎಂಬ ಪ್ರಶ್ನೆ ಉದ್ಭವಿಸುತ್ತದೆ ಎಂದು ಹೆಗಡೆ ಹೇಳಿದರು.ಅರಣ್ಯ ಇಲಾಖೆಯ ಕ್ರಮದಿಂದ ರೈತರಲ್ಲಿ ಆತಂಕ ಉಂಟಾಗಿದೆ. ರೈತರ ಮೇಲೆ ಉದ್ದೇಶಪೂರ್ವಕವಾಗಿ ದೌರ್ಜನ್ಯ ನಡೆಸಲಾಗುತ್ತಿದೆ ಎಂಬ ಭಾವನೆ ಮೂಡಿದೆ. ಯಾವುದೇ ಕಾರಣಕ್ಕೂ ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಮತ್ತು ಅವರ ಹೋರಾಟಕ್ಕೆ ಬೆಂಬಲ ನೀಡುವುದಾಗಿ ಅವರು ತಿಳಿಸಿದರು.
ಇದೇ ವೇಳೆ, ಹಲವು ದಶಕಗಳಿಂದ ಈ ಪ್ರದೇಶದಲ್ಲಿ ವಾಸಿಸುತ್ತಾ ಕೃಷಿ ಮಾಡಿಕೊಂಡು ಬರುತ್ತಿರುವ ರೈತರ ಸಮಸ್ಯೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಸುಮಾರು 65 ವರ್ಷಗಳಿಂದ ಇಲ್ಲಿ ನೆಲೆಸಿರುವ ರೈತರನ್ನು ಗುರುತಿಸಿ, ಸಾಧ್ಯವಾದಷ್ಟು ಭೂಮಿಯನ್ನು ಕಾನೂನುಬದ್ಧವಾಗಿ ಮಂಜೂರು ಮಾಡುವ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದರು.
ರೈತರನ್ನು ಏಕಾಏಕಿ ಜಮೀನಿನಿಂದ ತೆರವುಗೊಳಿಸಿದರೆ ಅವರ ಜೀವನೋಪಾಯಕ್ಕೆ ತೀವ್ರ ಹೊಡೆತ ಬೀಳಲಿದೆ. ಆದ್ದರಿಂದ ಸರ್ಕಾರ ರೈತರ ಸಮಸ್ಯೆಗೆ ಮಾನವೀಯ ಹಾಗೂ ಕಾನೂನುಬದ್ಧ ಪರಿಹಾರ ಕಂಡುಕೊಳ್ಳಬೇಕು ಎಂದು ಅನಂತಮೂರ್ತಿ ಹೆಗಡೆ ಆಗ್ರಹಿಸಿದರು.
