ಭಟ್ಕಳ: ನಗರದ ಹಾಗೂ ಗ್ರಾಮೀಣ ಭಾಗಗಳಲ್ಲಿ ಜನರು ಎಚ್ಚರಗೊಳ್ಳುವ ಮೊದಲೇ ದಿನದ ಸುದ್ದಿಯನ್ನು ಮನೆ ಬಾಗಿಲಿಗೆ ತಲುಪಿಸುವ ಪತ್ರಿಕಾ ವಿತರಕರ ಸೇವೆಯನ್ನು ಗುರುತಿಸುವ ಉದ್ದೇಶದಿಂದ ಭಟ್ಕಳದಲ್ಲಿ ಪತ್ರಿಕಾ ವಿತರಕರ ದಿನಾಚರಣೆಯನ್ನು ಆಚರಿಸಲಾಯಿತು.

ಭಟ್ಕಳ ಬಸ್ ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪತ್ರಿಕಾ ವಿತರಕರು ತಮ್ಮ ದಿನದ ವಿತರಣಾ ಕಾರ್ಯಕ್ಕೆ ತೆರಳುವ ಮುನ್ನ ಕೇಕ್ ಕತ್ತರಿಸಿ ಸಂಭ್ರಮಿಸಿದರು. ಶಿರಾಲಿಯ ವೈದ್ಯ ಡಾ. ಯಶವಂತ ನಾಯ್ಕ ಅವರು ಕೇಕ್ ಕತ್ತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ವಿತರಕರಿಗೆ ಶುಭಾಶಯ ಕೋರಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ಯಶವಂತ ನಾಯ್ಕ, ಹವಾಮಾನ ವೈಪರೀತ್ಯವನ್ನೂ ಲೆಕ್ಕಿಸದೆ ಪ್ರತಿದಿನ ಪತ್ರಿಕೆಗಳನ್ನು ಓದುಗರ ಮನೆಗಳಿಗೆ ತಲುಪಿಸುವ ವಿತರಕರ ಸೇವೆ ಗಮನಾರ್ಹವಾಗಿದೆ ಎಂದು ಹೇಳಿದರು. ಪತ್ರಿಕಾ ವಿತರಕರು ಹಾಗೂ ಅವರ ಕುಟುಂಬ ಸದಸ್ಯರಿಗಾಗಿ ಭಟ್ಕಳ ಮತ್ತು ಶಿರಾಲಿಯಲ್ಲಿ ಆರೋಗ್ಯ ಶಿಬಿರ ಆಯೋಜಿಸುವುದಾಗಿ ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬೆಂಗಳೂರಿನ ಯೋಗ ಶಿಕ್ಷಕ ಅಶೋಕ್ ಅವರು ಕೂಡ ಪತ್ರಿಕಾ ವಿತರಕರಿಗೆ ಶುಭ ಹಾರೈಸಿದರು. ಕೆಎಸ್‌ಆರ್‌ಟಿ ಅಧಿಕಾರಿ ಲಕ್ಷ್ಮೀಶ್ ಅವರು ವಿತರಕರ ಸೇವೆಯನ್ನು ಶ್ಲಾಘಿಸಿ ಶುಭಕೋರಿದರು.
ಪತ್ರಿಕಾ ವಿತರಕರ ಸಂಘದ ತಾಲೂಕು ಘಟಕದ ಅಧ್ಯಕ್ಷ ರಾಮಕೃಷ್ಣ ಭಟ್ ಮಾತನಾಡಿ, ಪ್ರತಿಕೂಲ ಹವಾಮಾನದ ನಡುವೆಯೂ ಮನೆಮನೆಗೆ ಪತ್ರಿಕೆ ತಲುಪಿಸುವ ಕಾಯಕವನ್ನು ವಿತರಕರು ನಿರಂತರವಾಗಿ ನಡೆಸುತ್ತಿದ್ದಾರೆ. ಈ ವೃತ್ತಿಯಲ್ಲಿ ಹಲವು ಸವಾಲುಗಳಿದ್ದರೂ ತಮ್ಮ ಜವಾಬ್ದಾರಿಯನ್ನು ಮುಂದುವರಿಸಿಕೊಂಡು ಬರುತ್ತಿರುವುದಾಗಿ ಹೇಳಿದರು.
ಪತ್ರಿಕಾ ವಿತರಕರಿಗೆ ಸರ್ಕಾರದಿಂದ ಹೆಚ್ಚಿನ ಸೌಲಭ್ಯಗಳು ದೊರೆಯಬೇಕೆಂಬ ಆಶಯವನ್ನೂ ಅವರು ವ್ಯಕ್ತಪಡಿಸಿದರು. ಸರ್ಕಾರದ ವಿವಿಧ ಯೋಜನೆಗಳು ಮತ್ತು ಮಾಹಿತಿಗಳು ಪತ್ರಿಕೆಗಳ ಮೂಲಕ ಸಾರ್ವಜನಿಕರನ್ನು ತಲುಪುತ್ತಿದ್ದು, ಆ ಮಾಹಿತಿಯನ್ನು ಮನೆಮನೆಗೆ ಕೊಂಡೊಯ್ಯುವ ವಿತರಕರಿಗಾಗಿ ಸರ್ಕಾರ ವಿಶೇಷ ಕಲ್ಯಾಣ ಯೋಜನೆಗಳನ್ನು ರೂಪಿಸಬೇಕು ಎಂದು ಮನವಿ ಮಾಡಿದರು.
ಇದೇ ವೇಳೆ ಬಾಲ್ಯದಿಂದಲೇ ಪತ್ರಿಕೆ ವಿತರಣೆ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಯಶಸ್ವಿ ಭಟ್ ಹಾಗೂ ರಶ್ಮಿತಾ ಭಟ್ ಅವರ ಸೇವೆಯನ್ನು ಕಾರ್ಯಕ್ರಮದಲ್ಲಿದ್ದ ಗಣ್ಯರು ಮೆಚ್ಚಿಕೊಂಡರು.ಸಂಘದ ಸದಸ್ಯರಾದ ಮಂಜುನಾಥ ಮೊಗೇರ್, ಗಣೇಶ್ ನಾಯ್ಕ್, ದಯಾನಂದ ನಾಯ್ಕ್, ಮಂಜುನಾಥ ನಾಯ್ಕ್ ಸೇರಿದಂತೆ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
