ಬೈಂದೂರು/ಶಿರಸಿ: ಬೈಂದೂರು ತಾಲೂಕಿನ ಹೋಳಿಹೊಳೆಯಲ್ಲಿರುವ ಶ್ರೀ ಬಿಳಿಸೆಲೆ ವಿನಾಯಕ ದೇವಸ್ಥಾನದ ಆವರಣದಲ್ಲಿ ನಡೆಯುತ್ತಿರುವ ಪರಮಪೂಜ್ಯ ಮಹಾ ಮಂಡಲೇಶ್ವರ 1008 ಸದ್ಗುರು ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಗಳ ಚಾತುರ್ಮಾಸ್ಯ ವ್ರತಾಚರಣೆ ಕಾರ್ಯಕ್ರಮದಲ್ಲಿ ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅನಂತಮೂರ್ತಿ ಹೆಗಡೆ ಅವರು ಭಕ್ತರೊಂದಿಗೆ ಭಾಗವಹಿಸಿದರು.

ಶಿರಸಿ, ಸಿದ್ದಾಪುರ ಹಾಗೂ ಬನವಾಸಿ ಭಾಗದಿಂದ ಆಗಮಿಸಿದ್ದ ಭಕ್ತರೊಂದಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅನಂತಮೂರ್ತಿ ಹೆಗಡೆ ಅವರು ಸ್ವಾಮೀಜಿಗಳ ಪಾದಪೂಜೆ ನೆರವೇರಿಸಿ ಮಹಾಸಂಕಲ್ಪ ಕೈಗೊಂಡರು. ಬಳಿಕ ಶ್ರೀಗಳೊಂದಿಗೆ ಆತ್ಮೀಯವಾಗಿ ಸಂವಾದ ನಡೆಸಿ, ಧಾರ್ಮಿಕ ಹಾಗೂ ಆಧ್ಯಾತ್ಮಿಕ ಮಾರ್ಗದರ್ಶನ ಪಡೆದುಕೊಂಡರು. ಈ ಸಂದರ್ಭದಲ್ಲಿ ಸ್ವಾಮೀಜಿಗಳಿಂದ ಮಂತ್ರಾಕ್ಷತೆಯನ್ನೂ ಸ್ವೀಕರಿಸಿದರು.

ಕಾರ್ಯಕ್ರಮದಲ್ಲಿ ಬನವಾಸಿ ಬಿಜೆಪಿ ಮಂಡಲಾಧ್ಯಕ್ಷ ರಮೇಶ ನಾಯ್ಕ ಕುಪ್ಪಳ್ಳಿ, ಉಪಾಧ್ಯಕ್ಷರಾದ ರಾಘವೇಂದ್ರ ನಾಯ್ಕ ಬದನಗೋಡು, ಶಿನಾ ಪೂಜಾರಿ ಗೇರುಮನೆ, ವೇಣುಗೋಪಾಲ ಹೆಗಡೆ, ಪ್ರವೀಣ ಹೆಗಡೆ, ಸಿದ್ದಾಪುರದ ವಿನಾಯಕ ನಾಯ್ಕ, ಕೃಷ್ಣಮೂರ್ತಿ ನಾಯ್ಕ ಐಸೂರು, ಪ್ರಜೋತ, ನವೀನ ನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದು, ಪಾದಪೂಜೆ ಹಾಗೂ ಮಹಾಸಂಕಲ್ಪ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಚಾತುರ್ಮಾಸ ಸಮಿತಿ ಅಧ್ಯಕ್ಷ ಗುರುರಾಜ್ ಗಂಟಿಹೊಳಿ ಅವರು ಕೂಡ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಅನಂತಮೂರ್ತಿ ಹೆಗಡೆ, ಚಾತುರ್ಮಾಸ್ಯ ವ್ರತಾಚರಣೆಯಂತಹ ಧಾರ್ಮಿಕ ಕಾರ್ಯಕ್ರಮದಲ್ಲಿ ಕ್ಷೇತ್ರದ ಭಕ್ತರು ಹಾಗೂ ಆತ್ಮೀಯರೊಂದಿಗೆ ಪಾಲ್ಗೊಳ್ಳುವ ಅವಕಾಶ ದೊರೆತಿರುವುದು ಸಂತಸ ಮತ್ತು ಧನ್ಯತೆಯ ಭಾವ ಮೂಡಿಸಿದೆ ಎಂದು ಹೇಳಿದರು.
“ಶ್ರೀಗಳ ಕೃಪೆ ಹಾಗೂ ಆಶೀರ್ವಾದ ಎಲ್ಲರ ಮೇಲೂ ಸದಾ ಇರಲಿ” ಎಂದು ಅವರು ಹಾರೈಸಿದರು.
