ಭಟ್ಕಳ-ನಕಲಿ ವೈದ್ಯಕೀಯ ಪ್ರಮಾಣ ಪತ್ರದ ಜೊತೆ ಉಡುಪಿಯ ಮೂಲದ ವ್ಯಕ್ತಿಯೊಬ್ಬರು ಉತ್ತರ ಕನ್ನಡ ಭಟ್ಕಳ ದ ಖಾಸಗಿ ಆಸ್ಪತ್ರೆಯಲ್ಲಿ ರೋಗಿಗಳ ಚಿಕಿಸ್ತೆ ಮಾಡಿದ್ದು, ಅಧಿಕಾರಿಗಳ ತಪಾಸಣೆ ವೇಳೆ ನಕಲಿ ವೈದ್ಯರ ಅಸಲಿತನ ಬಹಿರಂಗವಾಗಿದೆ. ಉಡುಪಿಯ ಮೂಲದ ಅಬುಮಹ್ಮದ್ ಎಂಬಾತರು ನಕಲಿ MBBS ಸರ್ಟಿಪಿಕೇಟ್ ಜೊತೆ ಭಟ್ಕಳಕ್ಕೆ ಆಗಮಿಸಿದ್ದು, ಇಲ್ಲಿನ ವೆಲಫೆರ್ ಆಸ್ಪತ್ರೆಯಲ್ಲಿ ಉದ್ಯೋಗವನ್ನು ಪಡೆದಿದ್ದಾರೆ!
ಉಡುಪಿ ಜಿಲ್ಲೆಯ ಗಂಗೋಳ್ಳಿಯ ಅಬುಮಹ್ಮದ್ ಅವರಿಗೆ ಮಾಡಲು ಕೆಲಸವಿರಲಿಲ್ಲ ಅನಿಸುತ್ತದೆ.ಉದ್ಯೋಗಕ್ಕೆ ಬೇಕಾದ ವಿದ್ಯಾರ್ಹತೆ ಸಹ ಅವರಿಗೆ ಗೊತ್ತಿರಲಿಲ್ಲ. ಅದಾಗಿಯೂ ಅವರು ನಕಲಿ ವಿದ್ಯಾಬ್ಯಾಸದ ಪ್ರಮಾಣ ಪತ್ರಪಡೆದಿದ್ದರು. ಆ ಪ್ರಮಾಣ ಪತ್ರದ ಪ್ರಕಾರ ಅಬುಮಹ್ಮದ್ ಅವರು MBBS ಓದಿದ ವೈದ್ಯರಾಗಿದ್ದರು!.
ಅದೇ ನಕಲಿ ಸರ್ಟಿಫಿಕೇಟ್ ಆಧಾರದಲ್ಲಿ ಅವರು ಭಟ್ಕಳಕ್ಕೆ ಬಂದು ಇಲ್ಲಿನ ವೆಲ್‌ಫೆರ್ ಆಸ್ಪತ್ರೆಗೆ ಭೇಟಿ ನೀಡಿದರು. 2024ರ ಅಕ್ಟೊಬರ್ 7ರಂದು ಅಬುಮಹ್ಮದ್ ಅವರು ಸಂದರ್ಶನವನ್ನು ಎದುರಿಸಿದರು. ಎಲ್ಲಾ ಪ್ರಶ್ನೆಗಳಿಗೂ ಚುಟುಕಾಗಿ ಉತ್ತರಿಸಿದ ಅಬುಮಹ್ಮದ್ ಅವರ ರೀತಿ ಸಂದರ್ಶನಕಾರರಿಗೆ ಇಷ್ಟವಾಗಿದ್ದು, ಅವರನ್ನು ವೈದ್ಯಕೀಯ ಹುದ್ದೆಗೆ ಆಸ್ಪತ್ರೆಯವರು ನೇಮಿಸಿಕೊಂಡರು. ಆದರೆ, ಅಬುಮಹ್ಮದ್ ಅವರು ಕರ್ನಾಟಕ ಮೆಡಿಕಲ್ ಕೌನ್ಸಿಲ್’ನ ಪ್ರಮಾಣ ಪತ್ರವನ್ನೇ ನಕಲು ಮಾಡಿದ್ದು ಆ ವೇಳೆ ಆಸ್ಪತ್ರೆಯವರ ಗಮನಕ್ಕೂ ಬರಲಿಲ್ಲ.
ಒಂದು ವರ್ಷಗಳ ಕಾಲ ವೆಲ್‌ಫೆರ್ ಆಸ್ಪತ್ರೆಯಲ್ಲಿ ಪಾರ್ಟ ಟೈಂ ಆಧಾರದಲ್ಲಿ ಅಬುಮಹ್ಮದ್ ಅವರು ವೈದ್ಯರಾಗಿದ್ದರು. ಅನೇಕ ರೋಗಿಗಳ ಆರೋಗ್ಯವನ್ನು ಅವರು ವಿಚಾರಿಸಿ ಔಷಧಿ ಕೊಟ್ಟಿದ್ದರು. ಇದಕ್ಕಾಗಿ ಆಸ್ಪತ್ರೆಯವರು ಸಹ ಅಬುಮಹ್ಮದ್ ಅವರಿಗೆ ಕೈ ತುಂಬ ಸಂಬಳ ಕೊಡುತ್ತಿದ್ದರು. ಆದರೆ, 2025ರ ಸೆಪ್ಟೆಂಬರ್ 2ರಂದು ಆಸ್ಪತ್ರೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯವರು ಭೇಟಿ ನೀಡಿದರು. ಅವರು ನಡೆಸಿದ ತಪಾಸಣೆಯಲ್ಲಿ ಅಬುಮಹ್ಮದ್ ಅವರ ನೈಜ ಬಣ್ಣ ಬಯಲಾಯಿತು.
ಅಕ್ಟೊಬರ್ 10ರಂದು ಜಿಲ್ಲಾ ಆರೋಗ್ಯಾಧಿಕಾರಿಗಳಿಂದ ವೆಲ್‌ಫೆರ್ ಆಸ್ಪತ್ರೆಯವರಿಗೆ ಪತ್ರ ಬಂದಿದ್ದು, ನಕಲಿ ಡಾಕ್ಟರ್ ವಿರುದ್ಧ ಪ್ರಕರಣ ದಾಖಲಿಸುವಂತೆ ಸೂಚಿಸಲಾಯಿತು. ಎಂ ಬಿ ಬಿ ಎಸ್ ಡಾಕ್ಟರ್ ಎಂದು ನಂಬಿಸಿ ಆಸ್ಪತ್ರೆ ಜೊತೆ ರೋಗಿಗಳಿಗೂ ಮೋಸ ಮಾಡಿದ ನಕಲಿ ಪ್ರಮಾಣ ಪತ್ರ ಹೊಂದಿರುವ ಅಬುಮಹ್ಮದ್ ವಿರುದ್ಧ ವೆಲ್‌ಫೆರ್ ಆಸ್ಪತ್ರೆ ಆಡಳಿತಾಧಿಕಾರಿ ಸಯ್ಯದ್ ಅಬ್ದುಲ್ ಅವರು ದೂರು ನೀಡಿದರು. ಭಟ್ಕಳ ನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.