ಭಟ್ಕಳ: ಜೀವನದ ಅರ್ಥವನ್ನು ಅರಿಯುವ ಬೆಳಕು ಒಂದೇ ಮನೆಯಿಂದ ಅನೇಕ ಹೃದಯಗಳಲ್ಲಿ ಹರಡಬಹುದು. “ಕಲಾಸಿರಿ ಪ್ರಶಸ್ತಿಯು ಬದುಕಿನ ಸಾರ್ಥಕತೆಯ ಜ್ಞಾನವನ್ನು ಇತರರೊಳಗೂ ಹರಡುವ ಶಕ್ತಿ ಹೊಂದಿದೆ,” ಎಂದು ಕಲಾಸಿರಿ ಪ್ರಶಸ್ತಿ ಪುರಸ್ಕೃತ ಹಿರಿಯ ಶಿಕ್ಷಕ ಪಿ. ಆರ್. ನಾಯ್ಕ ಹೇಳಿದರು.

ಶಿರಾಲಿ ಚಿತ್ರಾಪುರದ ಸಾಹಿತಿ ಶ್ರೀಧರ್ ಶೇಟ್ ಅವರ ಮನೆ *“ಕಲಾಸಿರಿ”*ಯಲ್ಲಿ, ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕಲಾಸಿರಿ ಪ್ರತಿಷ್ಠಾನ ಸಂಯುಕ್ತ ಆಶ್ರಯದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.ಶಿಕ್ಷಕ ದಂಪತಿಗಳಿಂದ ಮತ್ತೊಬ್ಬ ಶಿಕ್ಷಕರಿಗೆ ಈ ಗೌರವ ನೀಡಿರುವುದು ಅವರ ಹೃದಯದ ವಿಶಾಲತೆಯನ್ನು ತೋರಿಸುತ್ತದೆ ಎಂದು ಅವರು ಹೇಳಿದರು. “ಸತ್ಯಕ್ಕೆ ವಿವಾದದ ಅಗತ್ಯವಿಲ್ಲ; ಅದು ಸ್ವಯಂ ಪ್ರಕಾಶಮಾನ. ಕಲಾಸಿರಿ ಸಂಸ್ಥೆ ಶ್ರೀಧರ್ ಶೇಟ್ ರವರ ನಿಸ್ವಾರ್ಥ ಕಾರ್ಯಪ್ರೇರಣೆಯ ಪ್ರತೀಕ,” ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಸಾಹಿತಿ ಶಂಭು ಹೆಗಡೆ ಅವರು, “ಮನೆಯಂಗಳದಲ್ಲಿಂದ ಅರಳಿದ ಕಲಾಸಿರಿ ನಾಡಿನಲ್ಲೆಲ್ಲ ಸಾಹಿತ್ಯದ ಸುವಾಸನೆ ಹರಡಲಿ,” ಎಂದು ಶುಭಾಶಯ ಕೋರಿದರು.ಅವರು ಕಿರು ಕವನ ವಾಚಿಸಿ ಕಾರ್ಯಕ್ರಮಕ್ಕೆ ಮೆರಗು ತಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗಂಗಾಧರ ನಾಯ್ಕ ಅವರು ಕಾರ್ಯಕ್ರಮದ ಅಧ್ಯಕ್ಷತೆಯಲ್ಲಿ ಮಾತನಾಡಿ, “ಸಾಹಿತ್ಯ ಪರಿಷತ್ತು ಜನರ ಮನೆಯಲ್ಲಿ ನಡೆಯುವಾಗಲೇ ಅದು ನಿಜವಾದ ಅರ್ಥದಲ್ಲಿ ಪರಿಷತ್ತಾಗುತ್ತದೆ. ಇಂತಹ ಕಾರ್ಯಗಳು ಸಾಹಿತ್ಯ ಪ್ರೇಮಿಗಳ ಮನದಲ್ಲಿ ಕಲಾಸಿರಿಯ ನವೋದಯಕ್ಕೆ ಕಾರಣವಾಗುತ್ತವೆ,” ಎಂದರು.
ಸಾಹಿತಿ ನಾರಾಯಣ ಯಾಜಿ ಶಿರಾಲಿ ಮಾತನಾಡಿ, “ಮನೆಯಲ್ಲಿ ಸಾಹಿತ್ಯದ ಕಾರ್ಯಕ್ರಮವನ್ನು ಆಯೋಜಿಸುವುದು ಸುಲಭದ ಕೆಲಸವಲ್ಲ; ಅದನ್ನು ಶ್ರೀಧರ್ ಶೇಟ್ ದಂಪತಿಗಳು ಶ್ರದ್ಧೆಯಿಂದ ನೆರವೇರಿಸಿದ್ದಾರೆ,” ಎಂದು ಪ್ರಶಂಸಿಸಿದರು.
ಸರಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಎನ್. ನಾಯ್ಕ ಸನ್ಮಾನ ಸ್ವೀಕರಿಸಿ, ಸಂದರ್ಭೋಚಿತವಾಗಿ ಮಾತನಾಡಿದರು.ಈ ಸಂದರ್ಭದಲ್ಲಿ ಉಲ್ಲಾಸ ನಾಯ್ಕ, ವೆಂಕಟೇಶ ನಾಯ್ಕ, ಕುಮಾರ ನಾಯ್ಕ, ಎಂ.ಡಿ. ರಫೀಕ್, ಯು.ಎ. ಲೋಹಾನಿ, ವಿಲ್ಸನ್ ರೋಡ್ರಿಗಸ್, ಉಮೇಶ್ ಕೆರೆಕಟ್ಟೆ, ದೇವರಾಜ ದೇವಾಡಿಗ ಸೇರಿದಂತೆ ಅನೇಕ ಶಿಕ್ಷಕರನ್ನು ಕಲಾಸಿರಿ ಪ್ರತಿಷ್ಠಾನ ಗೌರವಿಸಿತು.
ಕನ್ನಡ ರಾಜ್ಯೋತ್ಸವದ ಅಂಗವಾಗಿ ನಡೆದ ಕವಿಗೋಷ್ಠಿಯಲ್ಲಿ ಮಂಜುನಾಥ ನಾಯ್ಕ ಯಲ್ವಡಿಕವೂರ್, ಸುರೇಶ ಮುರುಡೇಶ್ವರ್, ಹೇಮಲತಾ ಶ್ರೀಧರ್, ಶಂಕರ ನಾಯ್ಕ, ಸುಧಾ ಭಟ್ ಮತ್ತಿತರರು ಕವನ ವಾಚಿಸಿದರು.
ಈ ಸಂದರ್ಭದಲ್ಲಿ ಕಲಾಸಿರಿ ಪ್ರತಿಷ್ಠಾನವು ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಶ್ರೀಧರ್ ಶೇಟ್, ಪಿ.ಆರ್. ನಾಯ್ಕ ಮತ್ತು ಎಜು ಇನ್ಸ್ಪಾಯರ್ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ರಾಜಂ ನಾಯ್ಕ ಹಿಚ್ಕಡ ಅವರನ್ನು ಸನ್ಮಾನಿಸಿತು.
ಆರಂಭದಲ್ಲಿ ಶ್ರೀಧರ್ ಶೇಟ್ ಸ್ವಾಗತಿಸಿದರು; ಸಂತೋಷ ಆಚಾರ್ಯ ವಂದಿಸಿದರು. ಕಾರ್ಯದರ್ಶಿ ಹೇಮಲತಾ ಶೇಟ್ ಕಾರ್ಯಕ್ರಮವನ್ನು ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಶ್ರೀಶಾ ಶ್ರೀಧರ ಶೇಟ್, ನಾರಾಯಣ ದೇವಾಡಿಗ, ಕೃಷ್ಣಾನಂದ ಶೇಟ್, ವಿನಾಯಕ ಚಿತ್ರಾಪುರ, ಶೀತಲಾ ಚಿತ್ರಾಪುರ, ಪಿ.ಟಿ. ಚೌಹಾಣ, ರಾಮಚಂದ್ರ ಹೆಗಡೆ, ಸುಪ್ರಭ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

