ಮುರುಡೇಶ್ವರ:ಆರ್‌ಎನ್‌ಎಸ್ ಡಿಪ್ಲೋಮಾ ಕಾಲೇಜಿನ ಸಿಬ್ಬಂದಿ ಅರುಣಕುಮಾರ ನಾಯ್ಕ ಅವರ ಚಿನ್ನದ ಸರ ಕಳ್ಳತನ ಪ್ರಕರಣದಲ್ಲಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಸಿಸಿ ಕ್ಯಾಮರಾ ದೃಶ್ಯಾವಳಿಯ ಸಹಾಯದಿಂದ ಪೊಲೀಸರು ಆರೋಪಿಗಳನ್ನು ಪತ್ತೆಹಚ್ಚಿದ್ದಾರೆ.

ಮಾವಳ್ಳಿ-2ರ ನಿವಾಸಿ ಅರುಣಕುಮಾರ ಭಾಸ್ಕರ ನಾಯ್ಕ (32) ಅವರು ನವೆಂಬರ್ 2ರ ರಾತ್ರಿ ಬೈಕಿನಲ್ಲಿ ತೆರಳುತ್ತಿದ್ದ ವೇಳೆ ಅಜ್ಞಾತ ವ್ಯಕ್ತಿಗಳು ಅವರನ್ನು ತಡೆದು ಮಾತನಾಡಲು ಯತ್ನಿಸಿದ್ದರು. ಆ ವೇಳೆ ಸಂಭಾಷಣೆಯ ಮಧ್ಯೆ ಅಪರಿಚಿತರು ಮೋಸದ ರೀತಿಯಲ್ಲಿ ಅವರ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಕಿತ್ತು ಪರಾರಿಯಾಗಿದ್ದರು.
ಘಟನೆಯ ಕುರಿತು ಅರುಣಕುಮಾರ ನಾಯ್ಕ ಅವರು ಮುರುಡೇಶ್ವರ ಠಾಣೆಯಲ್ಲಿ ದೂರು ದಾಖಲಿಸಿದ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಕೈಗೊಂಡು ಮಂಡ್ಯ, ಮೈಸೂರು ಮತ್ತು ತಮಿಳುನಾಡು ಮೂಲದ ನಾಲ್ವರನ್ನು ಬಂಧಿಸಿದ್ದಾರೆ. ಸುಮಾರು 15 ಗ್ರಾಂ ತೂಕದ, ಅಂದಾಜು ಒಂದು ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಸರವನ್ನು ವಶಪಡಿಸಿಕೊಂಡಿದ್ದಾರೆ.
ಮುರುಡೇಶ್ವರ ಠಾಣೆ ಪೊಲೀಸರು ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

