ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರದಲ್ಲಿ ಸಂಭವಿಸಿದ ದುರ್ಘಟನೆಯಲ್ಲಿ ಇಬ್ಬರು ಲಿಪ್ಟ್ ತಾಂತ್ರಿಕರು ದಾರುಣವಾಗಿ ಮೃತಪಟ್ಟಿದ್ದಾರೆ.ಘಟನೆ ಕಾಮತ್ ಯಾತ್ರಿ ನಿವಾಸದ ಮಾಲಕ ವೆಂಕಟದಾಸ್ ಕಾಮತ್ ಅವರ ಹೊಸ ಕಟ್ಟಡದಲ್ಲಿ ಸಂಭವಿಸಿದೆ.

ಮಾಹಿತಿಯ ಪ್ರಕಾರ, ಆ ಕಟ್ಟಡದಲ್ಲಿದ್ದ ಕಾನ್ಸ್ಟ್ರಕ್ಷನ್ ಮಿನಿ ಲಿಫ್ಟ್ ಮೋಟಾರ್ ದೋಷಗೊಂಡಿತ್ತು. ಇದನ್ನು ದುರಸ್ಥಿ ಮಾಡಲು ಭಟ್ಕಳದ ಕಾಯ್ಕಿಣಿ ಪ್ರದೇಶದ ಪ್ರಭಾಕರ ಮುತ್ತಯ್ಯ ಶೆಟ್ಟಿ ಹಾಗೂ ಅವರ ಸಹಾಯಕ ಕುಂದಾಪುರದ ಬಾಬು ಮಡೂರ ಪೂಜಾರಿ ಅಕ್ಟೋಬರ್ 6ರಂದು ಸ್ಥಳಕ್ಕೆ ಆಗಮಿಸಿದ್ದರು.
ಅವರು ಲಿಪ್ಟ್‌ನ ಮೋಟಾರ್ ಸರಿಪಡಿಸಿದ ಬಳಿಕ ಅದರ ಸುರಕ್ಷತಾ ಲಾಕ್ ಕೂಡ ಹಾಳಾಗಿರುವುದು ಗಮನಿಸಲ್ಪಟ್ಟಿಲ್ಲ. ಈ ಕುರಿತು ಕಟ್ಟಡ ಮಾಲಕನಿಂದಲೂ ಯಾವುದೇ ಎಚ್ಚರಿಕೆ ನೀಡಲಾಗಿರಲಿಲ್ಲ ಎಂಬ ಮಾಹಿತಿ ದೊರೆತಿದೆ.
ಮೋಟಾರ್ ದುರಸ್ಥಿಯ ನಂತರ ಇಬ್ಬರೂ ಲಿಪ್ಟ್‌ನಲ್ಲಿ ಮೇಲ್ಮಹಡಿಯಿಂದ ಕೆಳಮಹಡಿಗೆ ಬರುತ್ತಿದ್ದಾಗ ಯಂತ್ರವು ಅಕಸ್ಮಿಕವಾಗಿ ತಿರುಚಿ ಕೆಳಗೆ ಬಿದ್ದಿದೆ. ಪರಿಣಾಮ, ಲಿಪ್ಟ್ ಮತ್ತು ಅದರೊಳಗಿನ ಇಬ್ಬರೂ ನೆಲಕ್ಕೆ ಅಪ್ಪಳಿಸಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ತಕ್ಷಣವೇ ಅವರನ್ನು ಮಣಿಪಾಲದ ಕಸ್ತೂರಿಬಾ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಇಬ್ಬರೂ ಅಲ್ಲಿ ಪ್ರಾಣಬಿಟ್ಟಿದ್ದಾರೆ.
ಘಟನೆ ಬಗ್ಗೆ ಮೃತ ಪ್ರಭಾಕರ ಶೆಟ್ಟಿ ಅವರ ಪುತ್ರ ಶ್ರವಣ ಶೆಟ್ಟಿ ಮುರುಡೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಕಾನ್ಸ್ಟ್ರಕ್ಷನ್ ಮಿನಿ ಲಿಫ್ಟ್ ಕಂಪನಿ ಮತ್ತು ಕಟ್ಟಡ ಮಾಲಕ ವೆಂಕಟದಾಸ್ ಕಾಮತ್ ವಿರುದ್ಧ ಅಪರಾಧ ಪ್ರಕರಣ ದಾಖಲಿಸಿದ್ದಾರೆ.

