ಬೆಂಗಳೂರು: ನಗರದಲ್ಲಿ ನಡೆದ ಭರ್ಜರಿ ಕಾರ್ಯಾಚರಣೆಯಲ್ಲಿ ಸಿಸಿಬಿ ಪೊಲೀಸರು ಬಿಟಿಎಂ ಲೇಔಟ್‌ನ ಮಾಜಿ ಸಬ್ ರಿಜಿಸ್ಟ್ರಾರ್ ರೂಪ ಹಾಗೂ ಸಹಚರ ನವೀನ್ ಅವರನ್ನು ಬಂಧಿಸಿದ್ದಾರೆ. ಇವರು ಸುಮಾರು ₹150 ಕೋಟಿಗೂ ಅಧಿಕ ಮೌಲ್ಯದ ಜಮೀನುಗಳನ್ನು ನಕಲಿ ದಾಖಲೆಗಳ ಆಧಾರದಲ್ಲಿ ರಿಜಿಸ್ಟರ್ ಮಾಡಿದ್ದರೆಂಬ ಆರೋಪ ಎದುರಿಸುತ್ತಿದ್ದಾರೆ.

ಪರಿಶೀಲನೆಯ ಪ್ರಕಾರ, ಬೇಗೂರು ಹೋಬಳಿ ಪ್ರದೇಶದ ಬೆರೆಟೇನ ಅಗ್ರಹಾರ ಗ್ರಾಮದ ಸರ್ವೆ ನಂ. 5/2ರಲ್ಲಿ 36 ಎಕರೆ 74 ಗುಂಟೆ ಹಾಗೂ 39 ಎಕರೆ 65 ಗುಂಟೆ — ಒಟ್ಟಾರೆ ಸುಮಾರು 75 ಎಕರೆ ಭೂಮಿಯನ್ನು ಅಕ್ರಮವಾಗಿ ಸೇಲ್ ಡೀಡ್ ಮೂಲಕ ವರ್ಗಾವಣೆ ಮಾಡಲಾಗಿತ್ತು. ಈ ಜಮೀನುಗಳು ಮೂಲತಃ ನಾಗರಾಜ್ ಶೆಟ್ಟಿ ಅವರ ಹೆಸರಿನಲ್ಲಿದ್ದು, ಅವರ ಪುತ್ರ ಮುಕುಂದ ಅವರ ಸ್ವತ್ತು ಎಂದು ದಾಖಲೆಗಳು ಸ್ಪಷ್ಟಪಡಿಸುತ್ತವೆ.
ಆದರೆ ಆರೋಪಿಗಳು, “ಗಣೇಶ್ ಎನ್.ವೈ” ಎಂಬಾತನನ್ನು ನಾಗರಾಜ್ ಶೆಟ್ಟಿ ಅವರ ಪುತ್ರ ಎಂದು ತೋರಿಸಿ ನಕಲಿ ದಾಖಲೆ ಸೃಷ್ಟಿಸಿ ಸೇಲ್ ಡೀಡ್ ಮಾಡಿಸಿದ್ದರು. ವಾಸ್ತವದಲ್ಲಿ ನಾಗರಾಜ್ ಶೆಟ್ಟಿಗೆ “ಗಣೇಶ್ ಎನ್.ವೈ” ಎಂಬ ಮಗನೇ ಇಲ್ಲವೆಂಬುದು ತನಿಖೆಯಿಂದ ಬಹಿರಂಗವಾಗಿದೆ.
ನಕಲಿ ದಾಖಲೆಗಳ ಅಡಿಯಲ್ಲಿ ಟ್ರಸ್ಟ್ ಹೆಸರಲ್ಲಿ ಜಮೀನುಗಳ ವ್ಯವಹಾರ ನಡೆಯುತ್ತಿರುವುದು ಪತ್ತೆಯಾಗುತ್ತಿದ್ದಂತೆಯೇ ಮುಕುಂದ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ನಂತರ ಪ್ರಕರಣ ಸಿಸಿಬಿ ಪೊಲೀಸರಿಗೆ ವರ್ಗಾವಣೆಗೊಂಡು, ಸೂಕ್ಷ್ಮ ತನಿಖೆಯ ಬಳಿಕ ಸಬ್ ರಿಜಿಸ್ಟ್ರಾರ್ ರೂಪ ಹಾಗೂ ನವೀನ್ ಬಂಧಿತರಾಗಿದ್ದಾರೆ.
ಈ ಪ್ರಕರಣದಲ್ಲಿ ಮತ್ತಷ್ಟು ವ್ಯಕ್ತಿಗಳು ಭಾಗಿಯಾಗಿರುವ ಸಾಧ್ಯತೆ ಇರುವುದರಿಂದ ಸಿಸಿಬಿ ಮುಂದಿನ ತನಿಖೆ ಮುಂದುವರಿಸಿದೆ.

