ಕಾರವಾರ: ನಗರದ ಆರ್ಟಿಒ ಕಚೇರಿಯ ಸಮೀಪ ಗುರುವಾರ ಸಂಜೆ ಸಂಭವಿಸಿದ ರಸ್ತೆ ದುರಂತದಲ್ಲಿ 15 ವರ್ಷದ ಬಾಲಕ ದಾರುಣ ಅಂತ್ಯ ಕಂಡಿದ್ದಾನೆ.

ಯಲ್ಲಾಪುರ ತಾಲೂಕಿನ ಇಡಗುಂದಿ ಮೂಲದ ಚಿರಂಜೀವ್ ಬೃಹ್ಮಾನಂದ ಕುಂಜಿ (15) ಮೃತನಾಗಿರುವ ಗುರುತು ಪತ್ತೆಯಾಗಿದೆ.ತಾಯಿ ಜೊತೆ ಕಾರವಾರದ ಮಾಜಾಳಿಯಲ್ಲಿ ವಾಸಿಸುತ್ತಿದ್ದ ಈ ಬಾಲಕ, ಸಂಜೆ ನಗರಕ್ಕೆ ಬರುತ್ತಿರುವ ವೇಳೆ ಅಪಘಾತ ಸಂಭವಿಸಿದೆ.
ಪ್ರಾಥಮಿಕ ಮಾಹಿತಿಯಂತೆ, ಸ್ಕೂಟಿ ಮೇಲೆ ಪ್ರಯಾಣಿಸುತ್ತಿದ್ದ ಚಿರಂಜೀವ್ ಮೇಲೆ ಹಿಂದಿನಿಂದ ವೇಗವಾಗಿ ಬಂದಿತ್ತು ಎಂದು ಹೇಳಲಾಗಿರುವ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳ ಬುಲೆಟ್ ಬೈಕ್ ಡಿಕ್ಕಿ ಹೊಡೆದಿದ್ದು, ಆಘಾತದಿಂದ ಸ್ಥಳದಲ್ಲಿಯೇ ಪ್ರಾಣ ಕಳೆದುಕೊಂಡಿದ್ದಾನೆ.
ಅಪಘಾತವನ್ನು ಕಂಡ ಸ್ಥಳೀಯರು ತಕ್ಷಣ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದು, ಬಳಿಕ ಅಂಬುಲೆನ್ಸ್ ಮೂಲಕ ಬಾಲಕನ ಶವ ಹಾಗೂ ಗಾಯಾಳುಗಳನ್ನು ಕಾರವಾರ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದೆ.
ಬಲವಾದ ಝಟ್ಕೆಯಿಂದ ಬಾಲಕನ ತಾಯಿ ಮತ್ತು ಬುಲೆಟ್ ಬೈಕ್‌ನಲ್ಲಿದ್ದ ವಿದ್ಯಾರ್ಥಿಗಳಿಗೆ ಗಂಭೀರ ಗಾಯಗಳಾಗಿದ್ದು, ಮುಂದಿನ ಚಿಕಿತ್ಸೆಗೆ ಅವರನ್ನು ಗೋವಾದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ಬಗ್ಗೆ ಕಾರವಾರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

