ಶಿರಸಿ: ಮಣಿಪುರದಲ್ಲಿ ಭಾರತೀಯ ಸೇನೆಯ ಕರ್ತವ್ಯದಲ್ಲಿದ್ದ ಸಂದರ್ಭದಲ್ಲಿ ಮೃತಪಟ್ಟ ತಾಲೂಕಿನ ಗಣಗೇರಿಯ ಯೋಧ ಗಿರೀಶ ಭಾಸ್ಕರ ನಾಯ್ಕ ಅವರ ಮನೆಗೆ ಬಿಜೆಪಿ ರೈತ ಮೋರ್ಚಾದ ಜಿಲ್ಲಾಧ್ಯಕ್ಷ ಅನಂತಮೂರ್ತಿ ಹೆಗಡೆ ಹಾಗೂ ಸ್ಥಳೀಯ ಬಿಜೆಪಿ ಮುಖಂಡ ಪ್ರಸನ್ನ ಹೆಗಡೆ ಹೊಳೆಬೈಲ್ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಅಗಲಿದ ಯೋಧನ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವ ಸೂಚಿಸಿದ ಮುಖಂಡರು, ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ಅಲ್ಲದೆ, ತಮ್ಮಿಂದಾದ ಆರ್ಥಿಕ ನೆರವನ್ನು ನೀಡಿ ದುಃಖದ ಸಂದರ್ಭದಲ್ಲಿ ಕುಟುಂಬದೊಂದಿಗೆ ಇರುವ ಭರವಸೆ ನೀಡಿದರು.

ನಂತರ ಮಾತನಾಡಿದ ಅನಂತಮೂರ್ತಿ ಹೆಗಡೆ, ಅಗ್ನಿವೀರ ಯೋಜನೆಯಡಿ ಭಾರತೀಯ ಸೇನೆಗೆ ಆಯ್ಕೆಯಾಗಿ ಮಣಿಪುರದಲ್ಲಿ ದೇಶದ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಗಿರೀಶ ಭಾಸ್ಕರ ನಾಯ್ಕ ಅವರ ಸಾವು ಅತ್ಯಂತ ನೋವಿನ ಸಂಗತಿಯಾಗಿದೆ. ದೇಶದ ರಕ್ಷಣೆಗಾಗಿ ಸೈನಿಕರು ಪ್ರತಿಕೂಲ ಹವಾಮಾನ ಹಾಗೂ ನಾನಾ ಸವಾಲುಗಳ ನಡುವೆಯೂ ನಿರಂತರವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರ ನಿಸ್ವಾರ್ಥ ಸೇವೆಯಿಂದಲೇ ದೇಶದ ನಾಗರಿಕರು ಸುರಕ್ಷಿತವಾಗಿ ಜೀವನ ನಡೆಸಲು ಸಾಧ್ಯವಾಗಿದೆ ಎಂದು ಹೇಳಿದರು.

ಯೋಧ ಗಿರೀಶ ಅವರ ತಂದೆ ಭಾಸ್ಕರ ನಾಯ್ಕ ಹಾಗೂ ತಾಯಿ ರೇವತಿ ನಾಯ್ಕ ಅವರು ದೇಶಕ್ಕೆ ಸೇವೆ ಸಲ್ಲಿಸಿದ ಹೆಮ್ಮೆಯ ಪುತ್ರನನ್ನು ಕಳೆದುಕೊಂಡಿದ್ದಾರೆ. ಅವರ ಕುಟುಂಬ ಅನುಭವಿಸುತ್ತಿರುವ ನೋವು ಅಪಾರವಾದುದು. ಈ ದುಃಖದ ಸಂದರ್ಭದಲ್ಲಿ ಕುಟುಂಬಕ್ಕೆ ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಭಗವಂತ ನೀಡಲಿ. ಕುಟುಂಬದ ಕಷ್ಟದ ಸಮಯದಲ್ಲಿ ನಾವೆಲ್ಲರೂ ಜೊತೆಯಾಗಿರುತ್ತೇವೆ ಎಂದು ತಿಳಿಸಿ ಪೋಷಕರಿಗೆ ಧೈರ್ಯ ತುಂಬಿದರು.ಭೇಟಿಯ ಸಂದರ್ಭದಲ್ಲಿ ನಾಗರಾಜ ನಾಯ್ಕ, ಮಂಜುನಾಥ ನಾಯ್ಕ ಸೇರಿದಂತೆ ಸ್ಥಳೀಯ ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
