
ಸಿದ್ದಾಪುರ: ಸಿದ್ದಾಪುರ ತಾಲೂಕಿನ ಬಿಳಗಿ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಹಾಗೂ ಕ್ಯಾದಗಿ ಅರಣ್ಯ ವಲಯಕ್ಕೆ ಒಳಪಡುವ ಗೋಳಿಕೈ ಗ್ರಾಮದಲ್ಲಿ ಅರಣ್ಯ ಇಲಾಖೆಯವರು ನಡೆಸಿದ ಮರ ಕಡಿತ ಕ್ರಮ ತೀವ್ರ ವಿವಾದಕ್ಕೆ ಕಾರಣವಾಗಿದೆ. ತಲೆಮಾರುಗಳಿಂದ ಸಾಗುವಳಿ ಮಾಡಿಕೊಂಡು ಬಂದಿದ್ದ ರೈತ ಜಯರಾಮ ಹೆಗಡೆ ಅವರ ಜಮೀನಿನಲ್ಲಿ ಸುಮಾರು 120ಕ್ಕೂ ಹೆಚ್ಚು ಅಡಿಕೆ ಮರಗಳನ್ನು ಮಂಗಳವಾರ ಕಡಿದು ಹಾಕಲಾಗಿದೆ ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ಬುಧವಾರ ಬಿಜೆಪಿ ಮುಖಂಡರು ಸ್ಥಳಕ್ಕೆ ಭೇಟಿ ನೀಡಿ ಘಟನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದರು.

ಉತ್ತರ ಕನ್ನಡ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ಅನಂತಮೂರ್ತಿ ಹೆಗಡೆ ಅವರ ನೇತೃತ್ವದಲ್ಲಿ ನಡೆದ ಈ ಭೇಟಿ ವೇಳೆ, ರೈತರಿಗೆ ಸಾಂತ್ವನ ಹೇಳಲಾಗಿದ್ದು, ಅರಣ್ಯ ಇಲಾಖೆಯ ಕ್ರಮವನ್ನು ಕಟುವಾಗಿ ಖಂಡಿಸಲಾಯಿತು.
ಈ ಸಂದರ್ಭ ಮಾತನಾಡಿದ ಅನಂತಮೂರ್ತಿ ಹೆಗಡೆ,
“ಅರಣ್ಯ ರಕ್ಷಣೆಯ ಹೆಸರಿನಲ್ಲಿ ರೈತರ ಬದುಕನ್ನೇ ನಾಶ ಮಾಡುವ ಅಧಿಕಾರವನ್ನು ಅರಣ್ಯ ಇಲಾಖೆಗೆ ಯಾರು ಕೊಟ್ಟಿದ್ದಾರೆ? ರೈತರ ದಿನಾಚರಣೆಯಂತಹ ಪವಿತ್ರ ದಿನದಲ್ಲೇ ಈ ರೀತಿಯ ಕ್ರಮ ಕೈಗೊಂಡಿರುವುದು ಎಷ್ಟರ ಮಟ್ಟಿಗೆ ನ್ಯಾಯಸಮ್ಮತ?” ಎಂದು ಪ್ರಶ್ನಿಸಿದರು.
1980ರ ಪೂರ್ವದಿಂದ ಸಾಗುವಳಿ ಮಾಡಿಕೊಂಡು ಬಂದ ತೋಟವನ್ನು ಸಂಪೂರ್ಣವಾಗಿ ನಾಶ ಮಾಡಲಾಗಿದೆ. ಬೇರೆ ಜಾತಿಯ ಮರಗಳನ್ನು ಬಿಟ್ಟು, ಕೇವಲ ಅಡಿಕೆ ಮರಗಳನ್ನು ಮಾತ್ರ ಕಡಿಯಲಾಗಿದೆ. ಇದು ರೈತರ ಮೇಲೆ ನಡೆಸಿದ ವ್ಯವಸ್ಥಿತ ಅನ್ಯಾಯ. ಜಿಲ್ಲೆಯ ರೈತರನ್ನು ಶಾಂತ ಸ್ವಭಾವದವರೆಂದು ದುರ್ಬಳಕೆ ಮಾಡಬಾರದು. ಅಗತ್ಯ ಬಿದ್ದರೆ ಉಗ್ರ ಹೋರಾಟಕ್ಕೂ ರೈತರು ಹಿಂದೇಟು ಹಾಕುವುದಿಲ್ಲ. ಅದರ ಪರಿಣಾಮಗಳ ಸಂಪೂರ್ಣ ಹೊಣೆಗಾರಿಕೆ ಅರಣ್ಯ ಇಲಾಖೆಯದ್ದೇ ಆಗಿರುತ್ತದೆ ಎಂದು ಎಚ್ಚರಿಸಿದರು.

ಸ್ಥಳೀಯ ಶಾಸಕರು ಹಾಗೂ ಅರಣ್ಯ ಇಲಾಖೆಯ ಮೇಲಾಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಅವರು ಆಗ್ರಹಿಸಿದರು.
ಇದೇ ವೇಳೆ ಮಾತನಾಡಿದ ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ಎಂ.ಕೆ. ತಿಮ್ಮಪ್ಪ,“ಅರಣ್ಯ ಇಲಾಖೆಯ ಅಧಿಕಾರಿಗಳು ರೈತರನ್ನು ಒಕ್ಕಲೆಬ್ಬಿಸುವುದನ್ನೇ ಗುರಿಯಾಗಿಸಿಕೊಂಡಂತೆ ವರ್ತಿಸುತ್ತಿದ್ದಾರೆ. ಯಾವಾಗ ಅಧಿಕಾರಿಗಳು ಬಂದು ಮರ ಕಡಿದುಹಾಕುತ್ತಾರೋ ಎಂಬ ಭಯದಲ್ಲಿ ತಾಲೂಕಿನ ರೈತರು ಬದುಕು ಸಾಗಿಸುವಂತಾಗಿದೆ,” ಎಂದು ಬೇಸರ ವ್ಯಕ್ತಪಡಿಸಿದರು.
ಬೇರೆ ದೇಶಗಳಿಂದ ಬಂದ ವಲಸಿಗರು ಹಾಗೂ ನಿರಾಶ್ರಿತರಿಗೆ ಭೂಮಿ ನೀಡಲು ಸರ್ಕಾರ ಮುಂದಾಗುತ್ತಿರುವಾಗ, ಇದೇ ನೆಲದಲ್ಲಿ ಹುಟ್ಟಿ ಬೆಳೆದ ರೈತರಿಗೆ ನ್ಯಾಯ ಸಿಗದಿರುವುದು ಅತ್ಯಂತ ಶೋಚನೀಯ ಸಂಗತಿ. ಈ ರೀತಿಯ ದೌರ್ಜನ್ಯ ಹೆಚ್ಚು ದಿನ ನಡೆಯುವುದಿಲ್ಲ. ರೈತರ ಪರವಾಗಿ ಯಾವ ರೀತಿಯ ಹೋರಾಟಕ್ಕೂ ನಾವು ಸಿದ್ಧ ಎಂದು ಹೇಳಿದರು.
ಈ ಸಂದರ್ಭ ಕ್ಯಾದಗಿ ವಲಯ ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿದ ತಿಮ್ಮಪ್ಪ, ಇಲಾಖೆಯವರಿಂದ ಸ್ಪಷ್ಟನೆ ಪಡೆದಿದ್ದಾರೆ. ಕಾನೂನು ಹಾಗೂ ನ್ಯಾಯಾಲಯದ ಆದೇಶದಂತೆ, ಮುಂಚಿತವಾಗಿಯೇ ನೋಟಿಸ್ ನೀಡಲಾಗಿತ್ತು ಎಂದು ಅರಣ್ಯ ಇಲಾಖೆಯವರು ಸಮಜಾಯಿಷಿ ನೀಡಿದ್ದಾರೆ ಎಂದು ಅವರು ತಿಳಿಸಿದರು.

ಬಿಜೆಪಿ ಪ್ರಮುಖರಾದ ರಾಘವೇಂದ್ರ ಶಾಸ್ತ್ರಿ, ಮಂಡಲ ಪ್ರಧಾನ ಕಾರ್ಯದರ್ಶಿ ತೋಟಪ್ಪ ನಾಯ್ಕ ಸೇರಿದಂತೆ ಹಲವು ಮುಖಂಡರು ಅರಣ್ಯ ಇಲಾಖೆಯ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರೈತ ಸಂಘದ ಜಿಲ್ಲಾಧ್ಯಕ್ಷ ಕೆರಿಯಪ್ಪ ನಾಯ್ಕ, ಕೃಷ್ಣಮೂರ್ತಿ ನಾಯ್ಕ (ಐಸೂರು), ಆದರ್ಶ ಪೈ ಅಣ್ಣಪ್ಪ ನಾಯ್ಕ (ಕಡಕೇರಿ), ವಿಜಯ ಹೆಗಡೆ ಸೇರಿದಂತೆ ಅನೇಕರು ಸ್ಥಳದಲ್ಲಿ ಉಪಸ್ಥಿತರಿದ್ದರು.
ರೈತರಿಗೆ ನ್ಯಾಯ ಒದಗಿಸದಿದ್ದಲ್ಲಿ, ಪಕ್ಷದ ಹಿರಿಯ ನಾಯಕರೊಂದಿಗೆ ಚರ್ಚಿಸಿ ಎರಡು ದಿನಗಳೊಳಗೆ ಅರಣ್ಯ ಇಲಾಖೆ ಕಚೇರಿ ಎದುರು ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಲಾಯಿತು. ಸ್ಥಳದಲ್ಲಿ “ನ್ಯಾಯ ಬೇಕು”, “ಅರಣ್ಯ ಇಲಾಖೆ ಅನ್ಯಾಯ ನಿಲ್ಲಿಸಲಿ” ಎಂಬ ಘೋಷಣೆಗಳು ಮೊಳಗಿದವು.

