
ಭಟ್ಕಳ: ನಗರದ ಶೆಟ್ಟಿ ಗ್ಯಾರೇಜ್ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಸಂಜೆ ಅಚಾನಕ್ ರಸ್ತೆ ದಾಟಿದ ಬೀದಿ ಹಸುವಿನಿಂದಾಗಿ ನಾಲ್ಕು ವಾಹನಗಳು ಒಂದರ ಹಿಂದೆ ಒಂದು ಡಿಕ್ಕಿ ಹೊಡೆದು, ಕೊನೆಗೆ ರಸ್ತೆ ಬದಿಯ ಇಳಿಜಾರಿನೊಳಗೆ ಉರುಳಿದ ಘಟನೆ ಸಂಭವಿಸಿದೆ. ಸಂಜೆ ಸುಮಾರು 4 ಗಂಟೆ ವೇಳೆಗೆ ನಡೆದ ಈ ಅವಘಡದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸದಿರುವುದು ನಿಟ್ಟುಸಿರು ಬಿಡುವ ಸಂಗತಿಯಾಗಿದೆ.ಸ್ಥಳದಲ್ಲಿದ್ದವರ ಮಾಹಿತಿ ಪ್ರಕಾರ, ಕೇರಳದಿಂದ ಮಹಾರಾಷ್ಟ್ರದ ಕಡೆಗೆ ತೆರಳುತ್ತಿದ್ದ ಕಾರಿನ ಮುಂದೆ ಏಕಾಏಕಿ ಹಸು ಕಾಣಿಸಿಕೊಂಡಿದೆ. ಅಪಘಾತ ತಪ್ಪಿಸಲು ಚಾಲಕ ತುರ್ತುವಾಗಿ ವಾಹನ ತಿರುಗಿಸಿದ ಪರಿಣಾಮ ನಿಯಂತ್ರಣ ತಪ್ಪಿ ಕಾರು ಮೊದಲು ಸರಕು ಸಾಗಣೆ ಆಟೋ ರಿಕ್ಷಾಗೆ ಡಿಕ್ಕಿಯಾಯಿತು. ನಂತರ ಅಲ್ಲಿದ್ದ ಹೊಸ ಬೊಲೆರೊ ಪಿಕ್‌ಅಪ್ ವಾಹನ ಹಾಗೂ ದುರಸ್ತಿ ಮುಗಿಸಿ ಗ್ಯಾರೇಜ್‌ನಿಂದ ಹೊರಬರುತ್ತಿದ್ದ ಇನ್ನೊಂದು ಪಿಕ್‌ಅಪ್ ವ್ಯಾನ್‌ಗೆ ಕ್ರಮವಾಗಿ ಡಿಕ್ಕಿ ಹೊಡೆದಿದೆ. ಕೊನೆಯಲ್ಲಿ ರಸ್ತೆ ಬದಿಯ ವೇಗ ಸೂಚನಾ ಫಲಕದ ಕಂಬಕ್ಕೂ ಕಾರು ಢಿಕ್ಕಿ ಹೊಡೆದಿದೆ.ಡಿಕ್ಕಿಯ ತೀವ್ರತೆಯಿಂದಾಗಿ ಎಲ್ಲ ವಾಹನಗಳು ರಸ್ತೆ ಕೆಳಗಿನ ಇಳಿಜಾರಿನೊಳಗೆ ಜಾರಿಬಿದ್ದವು. ಅಪಘಾತಕ್ಕೆ ಕಾರಣವಾದ ಹಸು ಯಾವುದೇ ಗಾಯವಿಲ್ಲದೆ ಅಲ್ಲಿಂದ ಸುರಕ್ಷಿತವಾಗಿ ತೆರಳಿದುದು ಸ್ಥಳೀಯರಲ್ಲಿ ಅಚ್ಚರಿಯ ಪ್ರತಿಕ್ರಿಯೆ ಮೂಡಿಸಿದೆ.

ಕಾರಿನಲ್ಲಿ ಕೇರಳ ಮೂಲದ ದಂಪತಿ ಹಾಗೂ ಅವರ ಮೂವರು ಮಕ್ಕಳು ಪ್ರಯಾಣಿಸುತ್ತಿದ್ದು, ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ. ಆದರೆ ಸರಕು ಸಾಗಣೆ ಆಟೋ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗಿದೆ ಎಂದು ತಿಳಿದುಬಂದಿದೆ.ಅಪಘಾತದ ನಂತರ ಕ್ರೇನ್ ಸಹಾಯದಿಂದ ವಾಹನಗಳನ್ನು ಮೇಲಕ್ಕೆ ಎತ್ತುವ ಕಾರ್ಯ ನಡೆದಿದ್ದು, ಈ ವೇಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತು. ಘಟನಾ ಸ್ಥಳದಲ್ಲಿ ಕುತೂಹಲದಿಂದ ಜನರು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದರು.ಈ ಘಟನೆ ಕುರಿತು ಆತಂಕ ವ್ಯಕ್ತಪಡಿಸಿರುವ ಸ್ಥಳೀಯ ನಿವಾಸಿಗಳು, ಭಟ್ಕಳ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೀದಿ ಪ್ರಾಣಿಗಳ ಹಾವಳಿ ಹೆಚ್ಚಾಗುತ್ತಿರುವುದಾಗಿ ಆರೋಪಿಸಿದ್ದಾರೆ. ರಸ್ತೆ ಸುರಕ್ಷತೆ ದೃಷ್ಟಿಯಿಂದ ಬೀದಿ ಪ್ರಾಣಿಗಳನ್ನು ನಿಯಂತ್ರಿಸುವಂತೆ ನಗರಸಭೆ ಹಾಗೂ ತಾಲೂಕು ಆಡಳಿತ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.


