
ಭಟ್ಕಳ ತಾಲ್ಲೂಕಿನ ಕಾಸ್ಮುಡಿ ಪ್ರದೇಶದಲ್ಲಿ “ಕಾಸ್ಮುಡಿ ಕಂದ” ಎಂಬ ಮಾತು ಜನಮನದಲ್ಲಿ ಉಳಿಯಲು ಕಾರಣರಾದವರು ಸಮಾಜ ಸೇವಕ ಹಾಗೂ ಭಾವಜೀವಿ ಶ್ರೀ ಅಣ್ಣಪ್ಪ ಎಂ. ಅಬ್ಬಿಹಿತ್ತಲ್. ತಮ್ಮ ಜೀವನದಲ್ಲಿ ಅನುಭವಿಸಿದ ಬಡತನ, ಸಂಕಷ್ಟ ಹಾಗೂ ಹೋರಾಟಗಳನ್ನೇ ಶಕ್ತಿಯಾಗಿ ಮಾಡಿಕೊಂಡು ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂಬ ಸಂಕಲ್ಪದೊಂದಿಗೆ ಬದುಕಿದ ಅಪರೂಪದ ವ್ಯಕ್ತಿತ್ವ ಇವರದು.

ಭಟ್ಕಳ ತಾಲ್ಲೂಕಿನ ಚೌಥನಿ ಗ್ರಾಮದ ನಿವಾಸಿಗಳಾದ ದಿವಂಗತ ಶ್ರೀ ಮಂಜುನಾಥ ನಾಯ್ಕ ಹಾಗೂ ದಿವಂಗತ ಶ್ರೀಮತಿ ಸುಕ್ರಿ ಮಂಜುನಾಥ ನಾಯ್ಕ ದಂಪತಿಗಳ ಮೂರನೇ ಪುತ್ರರಾಗಿ ಜನಿಸಿದ ಅಣ್ಣಪ್ಪ ನಾಯ್ಕರು ಕೃಷಿಕ ಕುಟುಂಬದ ಹಿನ್ನೆಲೆಯಿಂದ ಬಂದವರು. ಬಡತನದ ನಡುವೆಯೇ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಪುರವರ್ಗದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಪ್ರೌಢ ಶಿಕ್ಷಣವನ್ನು ಭಟ್ಕಳದ ನ್ಯೂ ಇಂಗ್ಲಿಷ್ ಶಾಲೆಯಲ್ಲಿ ಹಾಗೂ ಪಿಯುಸಿ ಶಿಕ್ಷಣವನ್ನು ಭಟ್ಕಳ ಅಂಜುಮಾನ್ ಕಾಲೇಜಿನಲ್ಲಿ ಪೂರ್ಣಗೊಳಿಸಿದರು.ಚಲನಶೀಲ ಸ್ವಭಾವ ಮತ್ತು ದೊಡ್ಡ ಕನಸುಗಳನ್ನು ಹೊಂದಿದ್ದ ಅಣ್ಣಪ್ಪ ನಾಯ್ಕರು ಜೀವನದ ಅಗತ್ಯತೆ ಹಾಗೂ ಭವಿಷ್ಯದ ಕನಸುಗಳನ್ನು ಬೆನ್ನುಹತ್ತಿ ಉದ್ಯೋಗದ ಹುಡುಕಾಟದಲ್ಲಿ ಮೈಸೂರಿಗೆ ತೆರಳಿದರು. ಅಲ್ಲಿ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ ಸಹೋದರ ಡಿ. ಜಯರಾಜೇ ಅರಸು ಅವರ ಪೇಪರ್ ಇಂಡಸ್ಟ್ರೀಸ್‌ನಲ್ಲಿ ಸುಪರ್ವೈಸರ್ ಆಗಿ ಕೆಲಸ ಆರಂಭಿಸಿದರು. ಜೊತೆಗೆ ವಿದ್ಯಾಭ್ಯಾಸದ ಮೇಲಿನ ಆಸಕ್ತಿಯಿಂದ ಮೈಸೂರಿನ ಡಿ. ಬನುಮಯ್ಯ ಸಂಜೆ ಕಾಲೇಜಿನಲ್ಲಿ ಬಿ.ಕಾಂ ಪದವಿಗೆ ಪ್ರವೇಶ ಪಡೆದು ಕೆಲಸ ಮತ್ತು ಓದನ್ನು ಸಮತೋಲನದಲ್ಲಿ ಮುಂದುವರಿಸಿದರು.
ಮೈಸೂರಿನ ಬದುಕು ಮತ್ತು ಕೆಲಸದ ಅನುಭವಗಳು ಇವರಲ್ಲಿ ಸ್ವಂತ ಉದ್ಯಮದ ಕನಸನ್ನು ಗಟ್ಟಿಗೊಳಿಸಿದವು. “ತಾನು ಉದ್ಯೋಗ ಹುಡುಕುವವನೇ ಅಲ್ಲ, ಉದ್ಯೋಗ ಕೊಡುವವನಾಗಬೇಕು” ಎಂಬ ದೃಢ ನಿಶ್ಚಯದೊಂದಿಗೆ ಅವರು ಪುನಃ ಹುಟ್ಟೂರಿಗೆ ಮರಳಿದರು. ಊರಿಗೆ ಬಂದ ನಂತರ ಯಾವುದೇ ಹಿಂಜರಿಕೆಯಾಗದೇ ಅಂದಿನ ಪ್ರಸಿದ್ಧ ಕೋಲಾಕೋ ಆಸ್ಪತ್ರೆಯಲ್ಲಿ ವಾರ್ಡ್ ಬಾಯ್ ಆಗಿ ಕೆಲಸಕ್ಕೆ ಸೇರಿದರು. ಬಳಿಕ ಕಂಪೌಂಡರ್, ಆಪ್ಟಿಕಲ್ ಅಂಗಡಿಯಲ್ಲಿ ಕೆಲಸ, ಆಪ್ಟಿಕಲ್ ಇಂಡಸ್ಟ್ರೀಸ್‌ನಲ್ಲಿ ಸುಪರ್ವೈಸರ್ ಹುದ್ದೆ ವರೆಗೆ ತಮ್ಮ ಶ್ರಮದ ಮೂಲಕ ಮುನ್ನಡೆದರು. ಈ ಅವಧಿಯಲ್ಲಿ ಜನಸೇವೆ ಅವರ ಬದುಕಿನ ಅವಿಭಾಜ್ಯ ಭಾಗವಾಯಿತು. “ಕೋಲಾಕೋ ಅಣ್ಣಪ್ಪ” ಎಂಬ ಹೆಸರಿನಿಂದಲೇ ಜನಪ್ರಿಯತೆ ಗಳಿಸಿದರು.
ಸ್ವಉದ್ಯೋಗದ ಕನಸು ಮತ್ತೆ ಚಿಗುರೊಡೆದು, ಕೆಂಪುಕಲ್ಲು ಕ್ವಾರಿ, ಶಿಲಾಕಲ್ಲು ಕ್ವಾರಿ, ಲಾರಿ–ಟಿಪ್ಪರ್ ವ್ಯವಹಾರ, ಮಣ್ಣಿನ ಇಟ್ಟಿಗೆ ತಯಾರಿಕಾ ಘಟಕ ಹಾಗೂ ಪುರವರ್ಗದಲ್ಲಿ ಕೋಲ್ಡ್ ಡ್ರಿಂಕ್ಸ್ ಫ್ಯಾಕ್ಟ್ರಿಯನ್ನು ಸ್ಥಾಪಿಸಿ ಯಶಸ್ವಿ ಉದ್ಯಮಿಯಾಗಿ ಹೊರಹೊಮ್ಮಿದರು. ತಮ್ಮ ಲಾರಿಗಳ ಮೇಲೆ “ಕಾಸ್ಮುಡಿ ಟ್ರಾನ್ಸ್‌ಪೋರ್ಟ್” ಎಂಬ ಹೆಸರಿಟ್ಟುಕೊಂಡು ಕಾಸ್ಮುಡಿ ಅಣ್ಣಪ್ಪ ಎಂದು ಪ್ರಸಿದ್ಧರಾದರು. ಅವರ ಉದ್ಯಮಗಳ ಮೂಲಕ ನೂರಾರು ಜನರಿಗೆ ಉದ್ಯೋಗ ನೀಡಿ ಬದುಕಿನ ಆಸರೆಯಾಗಿದ್ದಾರೆ.
ಆರ್ಥಿಕವಾಗಿ ಸ್ವಾವಲಂಬನೆ ಪಡೆದ ನಂತರವೂ ಅವರ ಸಾಮಾಜಿಕ ಕಾಳಜಿ ಇನ್ನಷ್ಟು ಗಟ್ಟಿಯಾಯಿತು. ತಾವು ಕೆಲಸ ಮಾಡಿದ್ದ ಕೋಲಾಕೋ ಆಸ್ಪತ್ರೆಯ ವೈದ್ಯರ ಸಹಕಾರದಿಂದ ಪುರವರ್ಗದಲ್ಲಿ ವಿವಿಧ ಸಂಘಟನೆಗಳ ಮೂಲಕ ಉಚಿತ ವೈದ್ಯಕೀಯ ಶಿಬಿರಗಳನ್ನು ಆಯೋಜಿಸಲು ಪ್ರಮುಖ ಪಾತ್ರ ವಹಿಸಿದರು. ತಮ್ಮ ಸ್ವಂತ ಖರ್ಚಿನಲ್ಲಿ ಮಂಗಳೂರು, ಉಡುಪಿ, ಕುಂದಾಪುರ ಮೊದಲಾದ ಕಡೆಗಳಿಗೆ ಅಸಹಾಯಕ ರೋಗಿಗಳನ್ನು ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ ಮಾನವೀಯತೆ ಇವರನ್ನು ವಿಭಿನ್ನವಾಗಿ ನಿಲ್ಲಿಸುತ್ತದೆ.

ಸಂಘಟನಾ ಕ್ಷೇತ್ರದಲ್ಲೂ ಅಣ್ಣಪ್ಪ ನಾಯ್ಕರು ಸಕ್ರಿಯರಾಗಿದ್ದು, ಪುರವರ್ಗ ವೀರಾಂಜನೇಯ ಯುವಕ ಸಂಘದ ಅಧ್ಯಕ್ಷರಾಗಿ, ಭಟ್ಕಳ ತಾಲ್ಲೂಕಾ ಯುವಜನ ಒಕ್ಕೂಟದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಅನೇಕ ಯುವಕ–ಯುವತಿ ಮಂಡಳಿಗಳ ಸ್ಥಾಪನೆಗೆ ಕಾರಣಕರ್ತರಾಗಿದ್ದು, ಸರ್ಕಾರದ ಸೌಲಭ್ಯಗಳು ಸರಿಯಾದವರಿಗೆ ತಲುಪುವಂತೆ ಮಾಡುವಲ್ಲಿ ಮಹತ್ವದ ಪಾತ್ರವಹಿಸಿದ್ದಾರೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ನಡೆದ ಮದ್ಯವರ್ಜನ ಶಿಬಿರಗಳಲ್ಲಿ ಗೌರವ ಸಲಹೆಗಾರರಾಗಿ ಕಾರ್ಯನಿರ್ವಹಿಸಿ, ಪೂಜ್ಯ ಶ್ರೀ ವೀರೇಂದ್ರ ಹೆಗ್ಗಡೆಯವರಿಂದ ಗೌರವ ಪಡೆದಿದ್ದಾರೆ.
ವೈಯಕ್ತಿಕ ಜೀವನದಲ್ಲೂ ಅವರು ಮಾನವೀಯತೆಯ ಮಾದರಿ. ಬಡ ಕುಟುಂಬದ ಕುಮಾರಿ ವಿದ್ಯಾ ನಾಯ್ಕರನ್ನು ವಿವಾಹವಾಗಿದ್ದು, ಮದುವೆಯ ಎಲ್ಲಾ ಖರ್ಚುಗಳನ್ನು ತಾವೇ ಭರಿಸಿ ಸಮಾಜಕ್ಕೆ ಆದರ್ಶ ತೋರಿಸಿದ್ದಾರೆ. ಈ ದಾಂಪತ್ಯಕ್ಕೆ ಇಬ್ಬರು ಗಂಡು ಮಕ್ಕಳು ಮತ್ತು ಒಬ್ಬ ಹೆಣ್ಣು ಮಗಳು ಜನಿಸಿದರು. ಆದರೆ ವಿಧಿಯ ಕ್ರೂರ ಆಟವಾಗಿ ಶ್ರೀಮತಿ ವಿದ್ಯಾ ನಾಯ್ಕರ ಅಗಲಿಕೆ ಅವರ ಜೀವನದಲ್ಲಿ ಆಘಾತ ಉಂಟುಮಾಡಿತು. ಆದರೂ ಸಹ ಧೃತಿಗೆಡದೇ ಸಮಾಜ ಸೇವೆಯ ಹಾದಿಯನ್ನು ಅವರು ಬಿಡಲಿಲ್ಲ.
ಕಾಸ್ಮುಡಿ ಹನುಮಂತ ದೇವಸ್ಥಾನದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಅಣ್ಣಪ್ಪ ನಾಯ್ಕರು, ಬಡವರ ಮದುವೆಗೆ ಮಂಟಪ ಬಾಡಿಗೆ ದೊಡ್ಡ ತೊಂದರೆಯಾಗುವುದನ್ನು ಮನಗಂಡು, ಕೇವಲ ₹5000 ಬಾಡಿಗೆಯ “ಸ್ವಯಂವರ” ಕಲ್ಯಾಣ ಮಂಟಪವನ್ನು ನಿರ್ಮಿಸುವ ಮಹತ್ವದ ಕಾರ್ಯದಲ್ಲಿ ಮುಂಚೂಣಿಯಲ್ಲಿ ನಿಂತರು. ಊರಿನ ದಾನಿಗಳು ಹಾಗೂ ಪ್ರತಿಷ್ಠಿತ ವ್ಯಕ್ತಿಗಳ ಸಹಕಾರದಿಂದ ಈ ಯೋಜನೆಯನ್ನು ಯಶಸ್ವಿಗೊಳಿಸಿ ಸಮಾಜಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ.
ಎದುರಾದ ಟೀಕೆಗಳು, ಅಡ್ಡಿಗಳು ಯಾವತ್ತೂ ಇವರನ್ನು ಹಿಂಜರಿಸಲಿಲ್ಲ. ಸದಾ ಸಮಾಜದ ಒಳಿತನ್ನೇ ಚಿಂತಿಸುವ ಮನೋಭಾವದಿಂದ ಬದುಕಿದ ಅಣ್ಣಪ್ಪ ನಾಯ್ಕ ಅಬ್ಬಿಹಿತ್ತಲ್ ಅವರು, ಕಥೆ–ಕವನ–ಭಾಷಣಗಳಲ್ಲಿ ಆಸಕ್ತಿ ಹೊಂದಿರುವ ಚಿಂತಕನೂ ಹೌದು. ಅವರ ಸೇವೆ, ತ್ಯಾಗ ಮತ್ತು ಕಾಳಜಿ ಮುಂದಿನ ಪೀಳಿಗೆಗೆ ಪ್ರೇರಣೆಯಾಗಲಿ ಎಂಬುದೇ ಸಮಾಜದ ಆಶಯ.
