
ಭಟ್ಕಳ: ಪಟ್ಟಣದ ಬೆಳಕೆ ಕಟಕೇರಿ ಪ್ರದೇಶದಲ್ಲಿ ಟಿವಿ ಡಿಶ್ ಅಳವಡಿಸುವ ಸಂದರ್ಭ ನಡೆದ ಅಪಘಾತದಲ್ಲಿ ಯುವಕನೊಬ್ಬ ಪ್ರಾಣ ಕಳೆದುಕೊಂಡ ಘಟನೆ ಮಂಗಳವಾರ ಸಂಜೆ ನಡೆದಿದೆ.

ಗೊರಟೆ ಹೊನ್ನೆಮುಡಿ ಸಮೀಪದ ಶಿರಜ್ಜಿಮನೆ ನಿವಾಸಿಯಾಗಿದ್ದ ಸಂತೋಷ ರಾಮ ನಾಯ್ಕ (35) ಅವರು ವೃತ್ತಿಯಿಂದ ಎಲೆಕ್ಟ್ರಿಷಿಯನ್ ಆಗಿದ್ದು, ಖಾಸಗಿ ಸಂಸ್ಥೆಯೊಂದರ ಮೂಲಕ ಟಿವಿ ಡಿಶ್ ಅಳವಡಿಕೆ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಡಿಸೆಂಬರ್ 30ರಂದು ಸಂಜೆ ವೇಳೆ ಬೆಳಕೆ ಕಟಕೇರಿಯ ನಿವಾಸಿ ಅರುಣ ಈರಪ್ಪ ನಾಯ್ಕ ಅವರ ಮನೆಯಲ್ಲಿ ಟಿವಿಗೆ ಡಿಶ್ ಅಳವಡಿಸುವ ಕಾರ್ಯಕ್ಕಾಗಿ ಸಂತೋಷ ನಾಯ್ಕ ಅವರನ್ನು ಆಹ್ವಾನಿಸಲಾಗಿತ್ತು. ಕೆಲಸದ ಭಾಗವಾಗಿ ಅವರು ಮನೆಯ ಮೇಲ್ಮಹಡಿಗೆ ತೆರಳಿ ಡಿಶ್ ಅಳವಡಿಸುತ್ತಿದ್ದಾಗ, ಅಚಾನಕ್ ಕಾಲು ಜಾರಿ ಮಹಡಿ ಮೇಲಿಂದ ಕೆಳಕ್ಕೆ ಬಿದ್ದಿದ್ದಾರೆ ಎನ್ನಲಾಗಿದೆ.
ಬಿದ್ದ ಪರಿಣಾಮವಾಗಿ ಅವರ ತಲೆಗೆ ತೀವ್ರ ಪೆಟ್ಟಾಗಿದ್ದು, ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನಿಸಲಾಯಿತು. ಆದರೆ, ಚಿಕಿತ್ಸೆ ಪಡೆಯುವ ಮುನ್ನವೇ ಅವರು ಮಾರ್ಗಮಧ್ಯದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಈ ದುರ್ಘಟನೆಗೆ ಸಂಬಂಧಿಸಿದಂತೆ ಮೃತರ ಸಹೋದರ ನಾಗೇಶ ರಾಮ ನಾಯ್ಕ ಅವರು ಮಾಹಿತಿ ನೀಡಿದ್ದು, ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.
