ಬೈಕ್ ಅಪಘಾತದಲ್ಲಿ ಭಯಪಟ್ಟು ಹೃದಯಾಘಾತದಿಂದ 9ನೇ ತರಗತಿ ವಿದ್ಯಾರ್ಥಿ ಸಾವು
ಭಟ್ಕಳ: ಬೈಕ್ ಅಪಘಾತವಾದಾಗ ಭಯಪಟ್ಟ 9ನೇ ತರಗತಿ ಬಾಲಕ ಕುಸಿದುಬಿದ್ದು ಮೃತಪಟ್ಟ ಆಘಾತಕಾರಿ ಘಟನೆ ಭಟ್ಕಳದಲ್ಲಿ ನಡೆದಿದೆ.
ಅಬ್ದುಲ್ಲಾ(14) ಹೃದಯಾಘಾತಕ್ಕೊಳಗಾಗಿ ಕುಸಿದು ಬಿದ್ದು ಮೃತಪಟ್ಟ ಬಾಲಕ. ಈತ 9ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ. ನಿನ್ನೆ ರಾತ್ರಿ ಬಾಲಕ ಅಬ್ದುಲ್ಲಾ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದಾಗ ಇನ್ನೊಂದು ಬೈಕ್ ಈತನ ಬೈಕ್ ಗೆ ಡಿಕ್ಕಿಯಾಗಿದೆ. ಈ ವೇಳೆ ಬಾಲಕ ಅಬ್ದುಲ್ಲಾ ಬೈಕ್ ಸಮೇತ ಬಿದ್ದಿದ್ದ.
ಬೈಕನ್ನು ಎತ್ತಿ ನಿಲ್ಲಿಸುವ ವೇಳೆ ಜನರು ಜಮಾಯಿಸಿದ್ದಾರೆ. ಇದರಿಂದ ಭಯಪಟ್ಟ ಅಬ್ದುಲ್ಲಾ ಅಲ್ಲಿಯೆ ಕುಸಿದ್ದು ಬಿದ್ದಿದ್ದಾನೆ. ತಕ್ಷಣ ಸಮೀಪದ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಈ ವೇಳೆ ಬಾಲಕ ಹೃದಯಾಘಾತದಿಂದ ಮೃತಪಟ್ಟಿರುವ ಬಗ್ಗೆ ವೈದ್ಯರು ದೃಢಪಡಿಸಿದ್ದಾರೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.