100ಕ್ಕೂ ಅಧಿಕ ಮಹಿಳೆಯರ ಮೇಲೆ ದೌರ್ಜನ್ಯ ಎಸಗಿರುವ ಪ್ರಕರಣ-ಸ್ವಯಂ ಘೋಷಿತ ದೇವಮಾನವ ಜೇಲೇಬಿ ಬಾಬಾ ಅಮರ್ ಪುರಿ ಗೆ 14 ವರ್ಷ ಜೈಲುಶಿಕ್ಷೆ ವಿಧಿಸಿ ತೀರ್ಪು ನೀಡಿದ ಕೋರ್ಟ್
ಚಂಡೀಗಢ- ನೂರಕ್ಕೂ ಅಧಿಕ ಮಹಿಳೆಯರ ಮೇಲೆ ದೌರ್ಜನ್ಯ ಎಸಗಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಹರ್ಯಾಣದ ಬಾಬಾ ಬಾಲಕನಾಥ್ ದೇವಾಲಯದ ಅರ್ಚಕ, ಜಿಲೇಬಿ ಬಾಬಾ ಎಂದೇ ಹೆಸರು ಪಡೆದಿದ್ದ ಸ್ವಯಂ ಘೋಷಿತ ದೇವಮಾನವ ಅಮರ್ ಪುರಿಗೆ ಫತೇಹಾಬಾದ್ ಫಾಸ್ಟ್ ಟ್ರ್ಯಾಕ್ ಕೋರ್ಟ್ ಬುಧವಾರ 14 ವರ್ಷ ಜೈಲುಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ನಾಲ್ಕು ಹೆಣ್ಣು ಮಕ್ಕಳು ಹಾಗೂ ಇಬ್ಬರು ಗಂಡು ಮಕ್ಕಳ ತಂದೆಯಾಗಿದ್ದ ಅಮರ್ ಪುರಿ ಸುಮಾರು 23 ವರ್ಷಗಳ ಹಿಂದೆ ಪಂಜಾಬ್ ನ ಮಾನ್ಸಾದಿಂದ ಹರ್ಯಾಣದ ತೋಹಾನಾ ಪ್ರದೇಶಕ್ಕೆ ವಲಸೆ ಬಂದಿದ್ದ. ಮೊದಲ 13 ವರ್ಷಗಳ ಕಾಲ ರೈಲ್ವೆ ನಿಲ್ದಾಣದ ಬಳಿ ಜಿಲೇಬಿ ಅಂಗಡಿ ಇಟ್ಟುಕೊಂಡಿದ್ದ. ಈ ಸಂದರ್ಭದಲ್ಲಿ ಮಂತ್ರವಾದಿಯೊಬ್ಬನನ್ನು ಭೇಟಿಯಾಗಿದ್ದ ಅಮರ್ ಪುರಿ, ಆತನಿಂದ ಕೆಲವು ವಿದ್ಯೆಗಳನ್ನು ಕಲಿತುಕೊಂಡ ಬಳಿಕ ತೋಹಾನಾದಿಂದ ಕೆಲವು ವರ್ಷಗಳ ಕಾಲ ಕಣ್ಮರೆಯಾಗಿದ್ದ.
ಹಲವು ವರ್ಷಗಳ ನಂತರ ಊರಿಗೆ ವಾಪಸ್ ಆಗಿದ್ದ ಅಮರ್ ಪುರಿ ದೇವಸ್ಥಾನದ ಸಮೀಪ ಮನೆಯೊಂದನ್ನು ನಿರ್ಮಿಸಿದ್ದು, ಆತನಿಗೆ ಅನುಯಾಯಿಗಳು ಹುಟ್ಟಿಕೊಳ್ಳತೊಡಗಿದ್ದರು. ಅದರಲ್ಲಿ ಹೆಚ್ಚಿನವರು ಮಹಿಳೆಯರೇ ಆಗಿದ್ದರು. ದಿನಕಳೆದಂತೆ ಅಮರ್ ವೀರ್ ಜಿಲೇಬಿ ಬಾಬಾನಾಗಿ ಜನಪ್ರಿಯತೆ ಪಡೆದ.
ಹೀಗೆ ತನ್ನ ಬಳಿ ದೋಷ ಪರಿಹಾರಕ್ಕಾಗಿ ಬರುತ್ತಿದ್ದ ಮಹಿಳೆಯರು, ಯುವತಿಯರಿಗೆ ಡ್ರಗ್ಸ್, ಅಮಲು ಪದಾರ್ಥ ನೀಡಿ ದೈಹಿಕ ದೌರ್ಜನ್ಯ ಎಸಗಿ ವಿಡಿಯೋ ರೆಕಾರ್ಡ್ ಮಾಡಿ ಇಟ್ಟುಕೊಂಡು, ಅವರನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ.
“ ಇದೀಗ ಪೋಕ್ಸೋ ಕಾಯ್ದೆ ಸೆಕ್ಷನ್ 6 ಸೇರಿದಂತೆ ವಿವಿಧ ಕಲಂನಡಿ ಜಿಲೇಬಿ ಬಾಬಾ ಅಲಿಯಾಸ್ ಅಮರ್ ಪುರಿ (63) ಗೆ ಹೆಚ್ಚುವರಿ ಜಿಲ್ಲಾ ಜಡ್ಜ್ ಬಲ್ವಂತ್ ಸಿಂಗ್ 14 ವರ್ಷಗಳ ಜೈಲುಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ಎಲ್ಲಾ ಪ್ರಕರಣ ಸೇರಿ ಜಿಲೇಬಿ ಬಾಬಾ 14 ವರ್ಷ ಜೈಲುಶಿಕ್ಷೆ ಅನುಭವಿಸಬೇಕು ಎಂದು ಸಂತ್ರಸ್ತರ ಪರ ವಕೀಲ ಸಂಜಯ್ ವರ್ಮಾ ತಿಳಿಸಿದ್ದಾರೆ.
ಅಮರ್ ಪುರಿ ಅಲಿಯಾಸ್ ಬಿಲ್ಲು ಎಂಬ ಸ್ವಯಂಘೋಷಿತ ದೇವಮಾನವ ಜಿಲೇಬಿ ಬಾಬಾನನ್ನು ಫತೇಹಾಬಾದ್ ಕೋರ್ಟ್ ದೋಷಿ ಎಂದು ಜನವರಿ 5ರಂದು ಆದೇಶ ನೀಡಿತ್ತು. ಈ ಸಂದರ್ಭದಲ್ಲಿ ಅಮರ್ ಪುರಿ ಕೋರ್ಟ್ ರೂಂನಲ್ಲಿ ಕಣ್ಣೀರಿಟ್ಟಿದ್ದ.