ಮಂಗಳೂರಿನ ಸುರತ್ಕಲ್ ನಲ್ಲಿ ಕೆಲಸಕ್ಕೆಂದು ಹೋಗಿ ನಾಪತ್ತೆಯಾದ ಯುವತಿ ಮದುವೆಯಾಗಿ ಪ್ರಿಯಕರನೊಂದಿಗೆ ಪತ್ತೆ
ಮಂಗಳೂರು-ಮಂಗಳೂರು ಜಿಲ್ಲೆಯ ಸುರತ್ಕಲ್ ನಲ್ಲಿ ಕೆಲಸಕ್ಕೆಂದು ಹೋದ ಯುವತಿ ಪ್ರೀತಿಸುತ್ತಿದ್ದ ಯುವಕನ ಜೊತೆಗೆ ಮದುವೆಯಾಗಿ ಠಾಣೆಗೆ ಹಾಜರಾದ ಘಟನೆ ನಡೆದಿದೆ.
ಕಳೆದ ಜನವರಿ 16ರಂದು ಮಣಪ್ಪುರಂ ಫೈನಾನ್ಸ್ ಕೆಲಸಕ್ಕೆ ತೆರಳಿ ಮನೆಗೆ ಹಿಂತಿರುಗದೆ ನಾಪತ್ತೆಯಾಗಿದ್ದ ಶಿವಾನಿ (20) ಪ್ರೀತಿಸುತ್ತಿದ್ದ ಯುವಕನ ಜೊತೆಗೂಡಿ ಬಂದಿದ್ದಾಳೆ.
ಶಿವಾನಿ ಫೈನಾನ್ಸ್ ಕೆಲಸಕ್ಕೆ ಹೋಗುತ್ತಿದ್ದ ವೇಳೆ ಡಿಜೆ ಆಪರೇಟರ್ ಆಗಿರುವ ಧನುಷ್ ಎಂಬಾತನನ್ನು ಪ್ರೀತಿಸುತ್ತಿದ್ದು ಆತನೊಂದಿಗೆ ಓಡಿಹೋಗಿದ್ದಳು. ಇವರು ರೈಲಿನ ಮೂಲಕ ಮಡಗಾಂವ್ ಗೆ ಹೋಗಿ ಅಲ್ಲಿ ಮೊಬೈಲ್ ಮಾರಿ ಬಂದ ಹಣದಲ್ಲಿ ಖರ್ಚು ಮಾಡುತ್ತಿದ್ದರು.
ಅಲ್ಲಿಂದ ದೆಹಲಿಗೆ ಹೋಗಿ ಅಲ್ಲಿ ಇನ್ನೊಂದು ಮೊಬೈಲ್ ಮಾರಿ ಬಂದ ಹಣ ಖರ್ಚು ಮಾಡಿ ಮತ್ತೆ ವಾಪಸ್ ಮಡಗಾಂವ್ ಗೆ ಬಂದಿದ್ದರು. ಅಲ್ಲಿ ಹಣಕ್ಕಾಗಿ ಸ್ನೇಹಿತರ ಮೂಲಕ ಗೂಗಲ್ ಪೇ ಮೂಲಕ ಹಣ ಹಾಕಿಸಿಕೊಂಡಿದ್ದರು. ಇತ್ತ ಸುರತ್ಕಲ್ ಪೊಲೀಸರು ಗೂಗಲ್ ಪೇ ನಂಬರ್ ಟ್ರೇಸ್ ಮಾಡಿ ಜೋಡಿಯನ್ನು ಪತ್ತೆ ಹಚ್ಚಿದ್ದಾರೆ.
ಯುವತಿ ಪೊಲೀಸ್ ಠಾಣೆಗೆ ಬಂದು ದೇವಸ್ಥಾನದಲ್ಲಿ ಮದುವೆಯಾಗಿದ್ದಾಗಿ ಹೇಳಿಕೆ ನೀಡಿದ್ದಾಳೆ. ಈ ವೇಳೆ ಯುವತಿ ಹೆತ್ತವರು ಅಂಗಲಾಚಿ ಬೇಡಿಕೊಂಡರೂ ಅವರ ಜೊತೆ ಹೋಗಲು ಯುವತಿ ನಿರಾಕರಿಸಿ ಧನುಷ್ ಜೊತೆ ಹೋಗುವುದಾಗಿ ಪಟ್ಟು ಹಿಡಿದಳು ಎಂದು ತಿಳಿದು ಬಂದಿದೆ.