ಮುರುಢೇಶ್ವರದ ಹ್ಯೂಮನ್ ವೆಲ್ಫೇರ್ ಟ್ರಸ್ಟ್ ನಿಂದ ಸೌಹಾರ್ದ ಕಾರ್ಯಕ್ರಮ
ಭಟ್ಕಳ: ಮುರುಢೇಶ್ವರದ ಹ್ಯೂಮನ್ ವೆಲ್ಫೇರ್ ಟ್ರಸ್ಟ್ ವತಿಯಿಂದ ಬುಧವಾರ ಸಂಜೆ ಮುರುಢೇಶ್ವರದ ಶಾದಿ ಮಹಲ್ ನಲ್ಲಿ ಸೌಹಾರ್ದ ಕಾರ್ಯಕ್ರಮ ಜರುಗಿತು.
ಮುಖ್ಯ ಅತಿಥಿಯಾಗಿ ಮಾತನಾಡಿದ ಆರ್.ಎನ್.ಎಸ್ ಪೊಲಿಟೆಕ್ನಿಕ್ ಕಾಲೇಜಿನ್ ವಿಶ್ರಾಂತ ಪ್ರಾಂಶುಪಾಲ ಡಾ.ಎಂ.ವಿ.ಹೆಗಡೆ, ಮುರುಢೇಶ್ವರದಲ್ಲಿ ಜನರು ಯಾವತ್ತೂ ಸೌಹಾರ್ದತೆಯಿಂದ ಬಾಳಿ ಬದುಕುತ್ತಿದ್ದಾರೆ. ಇಲ್ಲಿನ ಸೌಹಾರ್ದತೆ ಇತರರಿಗೆ ಮಾದರಿಯಾಗಲಿ ಎನ್ನುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜನೆಯಾಗಿದೆ ಎಂದರು.
ನಮ್ಮಲ್ಲಿನ ಪ್ರತಿಯೊಬ್ಬರಲ್ಲಿ ಹರಿಯುತ್ತಿರುವ ರಕ್ತ ಒಂದೇ ಆಗಿದ್ದು, ಸೇವಿಸುವ ಗಾಳಿ, ನೀರು ಎಲ್ಲವೂ ಒಂದೇ ಆಗಿರುವಾಗ ನಮ್ಮಲ್ಲಿನ ಈ ಬೇಧ-ಭಾವ ಯಾಕೆ ಎಂದು ನನಗೆ ಗೊತ್ತಾಗುತ್ತಿಲ್ಲ. ನಮಗೆ ಸಿಕ್ಕಿರುವ ಈ ಅಲ್ಪ ಜೀವನದಲ್ಲಿ ದ್ವೇಷ, ಜಗಳವನ್ನು ಬದಿಗಿಟ್ಟು ಬದುಕುವುದನ್ನು ಕಲಿಯೋಣ ಎಂದು ಕರೆ ನೀಡಿದರು.
ಭಟ್ಕಳ ಅರ್ಬನ್ ಬ್ಯಾಂಕಿನ ನಿವೃತ್ತ ವ್ಯವಸ್ಥಾಪಕ ಶಂಭೂ ಹೆಗಡೆ ಮಾತನಾಡಿ, ನಾವೆಲ್ಲರೂ ಸೌಹಾರ್ದಯುತವಾಗಿಯೆ ಇದ್ದೇವೆ. ಆದರೆ ನಮ್ಮ ನಮ್ಮಲ್ಲಿ ದ್ವೇಷ ಭಾವನೆ ಎಲ್ಲಿಂದ ಬರುತ್ತಿದೆ ಎಂದು ಪ್ರಶ್ನಿಸಿದ ಅವರು, ನಾವು ಬಂದಿದ್ದು ಬರಿಗೈಯಿಂದ, ಹೋಗುವುದೂ ಬರಿಗೈಯಿಂದಲೇ, ಹಾಗಾಗಿ ನಾವು ಇದ್ದಷ್ಟು ದಿನ ಒಳ್ಳೆಯವರಾಗಿ ಬಾಳೋಣ ಎಂದರು
ಅಧ್ಯಕ್ಷತೆ ವಹಿಸಿದ್ದ ಆಲ್ ಇಂಡಿಯಾ ಐಡಿಯಲ್ ಟೀಚರ್ಸ್ ಅಸೋಸಿಯೇಶನ್ ಕರ್ನಾಟಕ ಇದರ ರಾಜ್ಯಾಧ್ಯಕ್ಷ ಮುಹಮ್ಮದ್ ರಝಾ ಮಾನ್ವಿ ಮಾತನಾಡಿ, ಭಯ ಮತ್ತು ದ್ವೇಷದ ನಡುವೆ ಶಾಂತಿ, ಪ್ರೀತಿ, ಸಹೋದರತೆಯ ಕುರಿತು ಚರ್ಚೆ ನಡೆಯುತ್ತಿರುವುದು ಶ್ಲಾಘನೀಯ. ನಾವು ದ್ವೇಷ, ಹಗೆತನವನ್ನು ಮೆಟ್ಟಿನಿಂತು ಪರಸ್ಪರರಲ್ಲಿ ನಂಬಿಕೆ, ಪ್ರೀತಿ ಸೌಹಾರ್ದತೆಯ ವಾತವರಣ ಸೃಷ್ಟಿ ಮಾಡಬೇಕು, ಧರ್ಮ ರಕ್ಷಣೆಯ ಹೆಸರಲ್ಲಿ ಅಧರ್ಮದ ಕೆಲಸ ಮಾಡುತ್ತಿರುವವರ ಕುರಿತು ಜಾಗೃತರಾಗಬೇಕು, ಸಮಾಜಘಾತುಕರು, ಸಮಾಜದ ಹಿತ ಬಸಯದೇ ಇರುವವರು ನಮ್ಮಲ್ಲಿ ಪರಸ್ಪರ ಕಚ್ಚಾಡುವಂತ ಸನ್ನಿವೇಶವನ್ನು ನಿರ್ಮಾಣ ಮಾಡುತ್ತಿದ್ದಾರೆ.ಇಂತಹ ಸೌಹಾರ್ದಕೂಟಗಳ ಮೂಲಕ ನಾವು ಮನುಷ್ಯರನ್ನು ಪ್ರೀತಿಸಲು, ಹೃದಯಗಳನ್ನು ಬೆಸೆಯುವಂತಹ ಕೆಲಸ ಮಾಡಬೇಕಾಗಿದೆ ಎಂದು ಕರೆ ನೀಡಿದರು.
ಮುರುಢೇಶ್ವರ ಗ್ರಾಮೀಣ ಶಿಕ್ಷಣ ಪ್ರತಿಷ್ಠಾನದ ಸಂಸ್ಥಾಪಕ ಎಸ್.ಎಸ್. ಕಾಮತ್, ಫಿಲಿಫ್ ಅಲ್ಮೆಡಾ, ಮೌಲಾನ ಸಕ್ರಾನ್ ನದ್ವಿ ಮಾತನಾಡಿದರು. ಡಾ. ಮನೋಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಹ್ಯೂಮನ್ ವೆಲ್ಫೇರ್ ಟ್ರಸ್ಟ್ ನ ಅಧ್ಯಕ್ಷ ಡಾ.ಅಮೀನುದ್ದೀನ್ ಗೌಡ ಪ್ರಸ್ತಾವಿಕವಾಗಿ ಮಾತನಡಿ ಎಲ್ಲರನ್ನೂ ಸ್ವಾಗತಿಸಿದರು. ಮಾವಳ್ಳಿ ಗ್ರಾ.ಪಂ ಸದಸ್ಯ ನಾಗೇಶ್ ನಾಯ್ಕ ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಸಲ್ಲಿಸಿದರು.