ಭಟ್ಕಳ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಮಂಡ್ಯದಲ್ಲಿ ಡಿಸೆಂಬರ್ 20ರಿಂದ 22ರ ವರೆಗೆ ಮೂರು ದಿನಗಳ ಕಾಲ ಜನಪದ ಭೀಷ್ಮ ಶ್ರೀ ಗೊ.ರು. ಚನ್ನಬಸಪ್ಪರವರ ಅಧ್ಯಕ್ಷತೆಯಲ್ಲಿ ಜರುಗುತ್ತಿದೆ. ಈ ಅಕ್ಷರ ಜಾತ್ರೆಗೆ ಭಟ್ಟಳ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗಂಗಾಧರ ನಾಯ್ಕ ಮತ್ತು ಕೋಶಾಧ್ಯಕ್ಷ- ಸಾಹಿತಿ ಶ್ರೀಧರ ಶೇಟ್ ಶಿರಾಲಿ ಅವರಿಗೆ ವಿಶೇಷ ಆಮಂತ್ರಿತರಾಗಿ ಆಹ್ವಾನಿಸಲಾಗಿದೆ.
ಈ ಕುರಿತು ಇಬ್ಬರಿಗೂ ವೈಯಕ್ತಿಕ ಪತ್ರ ಮತ್ತು ಆಹ್ವಾನ ಪತ್ರಿಕೆಗಳನ್ನು ರಾಜ್ಯಾಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿಯವರು ಕಳುಹಿಸಿದ್ದು, ಮೂವತ್ತು ವರ್ಷಗಳ ನಂತರ ಮಂಡ್ಯದಲ್ಲಿ ನಡೆಯುತ್ತಿರುವ ಮೂರನೇ ಸಮ್ಮೇಳನ ಇದಾಗಿದ್ದು ಕರ್ನಾಟಕದ ನಾಮಕರಣವಾದ ಸುವರ್ಣ ಮಹೋತ್ಸವ ವರ್ಷಗಳ ಹಿನ್ನೆಲೆಯಲ್ಲಿ ವಿಶಿಷ್ಟವಾಗಿದ್ದು ಸಮ್ಮೇಳನಕ್ಕೆ ತಮ್ಮನ್ನು ವಿಶೇಷ ಆಹ್ವಾನಿತರನ್ನಾಗಿ ಆಮಂತ್ರಿಸಲು ಕನ್ನಡ ಸಾಹಿತ್ಯ ಪರಿಷತ್ತು ಹರ್ಷಿಸುತ್ತದೆ ಎಂದು ಪತ್ರ ಬರೆದು ತಾವು ಮೂರು ದಿನಗಳೂ ತಮ್ಮೊಂದಿಗಿದ್ದು ಸಮ್ಮೇಳನವನ್ನು ಯಶಸ್ವಿಯಾಗಿಸಲು ಕೋರಿದ್ದಾರೆ.
ಇದು ಸಾಹಿತ್ಯ ಸಂಘಟನೆಯಲ್ಲಿ ಮತ್ತು ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಇಬ್ಬರಿಗೂ ಸಂದ ಗೌರವವಾಗಿದೆ. ಇವರನ್ನು ಭಟ್ಕಳ ತಾಲೂಕ ಕನ್ನಡ ಸಾಹಿತ್ಯ ಪರಿಷತ್ ನ ಕಾರ್ಯಕಾರಿ ಸಮಿತಿಯ ಸದಸ್ಯರು, ಸಾಹಿತಿಗಳು ಹಾಗೂ ಸಂಘ ಸಂಸ್ಥೆಗಳ ಪ್ರಮುಖರು ಹರ್ಷ ವ್ಯಕ್ತಪಡಿಸಿದ್ದಾರೆ.