ಕಾರವಾರ: ಕದಂಬ ನೌಕಾನೆಲೆಯ ಕುರಿತು ಮಾಹಿತಿಯನ್ನು ಪಾಕಿಸ್ತಾನದ ಗುಪ್ತಚಾರಿಗಳಿಗೆ ನೀಡಿದ ಆರೋಪದ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) (NIA) ಮಂಗಳವಾರ ಇಬ್ಬರನ್ನು ಬಂಧಿಸಿದೆ.
ಅಂಕೋಲಾ ತಾಲೂಕಿನ ಅಕ್ಷಯ ನಾಯ್ಕ ಮತ್ತು ಕಾರವಾರ ತಾಲೂಕಿನ ಮುದುಗದ ವೇತನ ತಂಡೆಲ್ ಅವರನ್ನು ಬಂಧಿಸಲಾಗಿದೆ. ಹೈದರಾಬಾದ್ನ ಎನ್ಐಎ ಅಧಿಕಾರಿಗಳ ತಂಡ ಸೋಮವಾರ ಕಾರವಾರದಲ್ಲಿ ತಂಗಿದ್ದು, ನಗರ ಪೊಲೀಸ್ ಠಾಣೆಯಲ್ಲಿ ರಾತ್ರಿ ತನಕ ಅಗತ್ಯ ದಾಖಲೆಗಳನ್ನು ಪರಿಶೀಲಿಸಿತು. ಬಳಿಕ, ಅವರು ಕಾರವಾರದಲ್ಲಿ ಉಳಿದುಕೊಂಡು, ಮಂಗಳವಾರ ಮುಂಜಾನೆ ಪ್ರತ್ಯೇಕ ತಂಡವನ್ನು ರಚಿಸಿ, ಎರಡು ಕಡೆಗಳಿಂದ ದಾಳಿ ನಡೆಸಿದ್ದಾರೆ.
ಅಂಕೋಲಾದಲ್ಲಿ ಬಂಧಿತನಾದ ಅಕ್ಷಯ ನಾಯ್ಕನನ್ನು ಅಲ್ಲಿಯೇ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಕಾರವಾರಕ್ಕೆ ತರಲಾದ ಇನ್ನೊಬ್ಬ ಆರೋಪಿಯನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆ ಮಾಡಲಾಗಿದೆ. ನಂತರ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
2024ರ ಆಗಸ್ಟ್ ತಿಂಗಳಲ್ಲಿ, ನೌಕಾ ತಾಣದ ಮಾಹಿತಿಯನ್ನು ಪಾಕಿಸ್ತಾನಕ್ಕೆ ಸೋರಿಕೆ ಮಾಡಿದ ಆರೋಪದ ಮೇಲೆ ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿತ್ತು. ನಂತರ ಅವರಿಗೆ ನೋಟಿಸ್ ನೀಡಿ ಬಿಡುಗಡೆ ಮಾಡಲಾಗಿತ್ತು. ಇದೀಗ ಅದೇ ಪ್ರಕರಣದ ಮುಂದುವರೆದ ತನಿಖೆಯ ಭಾಗವಾಗಿ ಇಬ್ಬರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ.