ಪಿ.ಯು.ಸಿ ವಿದ್ಯಾರ್ಥಿನಿಯ ಮೇಲೆ ಕಾಲೇಜು ಪ್ರಿನ್ಸಿಪಾಲ್ ಅತ್ಯಾಚಾರ ಮಾಡಿ ಕೊಲೆ- ಪಾಲಕರ ಆರೋಪ ಮತ್ತು ಆಕ್ರೋಶ, ಸಾರ್ವಜನಿಕರಿಂದ ಕಾಲೇಜು ಮುತ್ತಿಗೆ
ರಾಯಚೂರು-ವಿದ್ಯಾರ್ಥಿನಿಯನ್ನು ಕಾಲೇಜಿನ ಪ್ರಾಂಶುಪಾಲನೋರ್ವ ಅತ್ಯಾಚಾರವೆಸಗಿ ಕೊಲೆ ಮಾಡಿ ನಂತರ ಶವವನ್ನು ಹಾಸ್ಟೆಲ್ ಕೊಠಡಿಯಲ್ಲಿ ನೇಣು ಹಾಕಿರುವ ಘಟನೆ ರಾಯಚೂರು ಜಿಲ್ಲೆಯ ಲಿಂಗಸುಗೂರು ಎಂಬಲ್ಲಿ ನಡೆದಿದೆ. ಆರೋಪಿ ಪ್ರಾಂಶುಪಾಲರ ವಿರುದ್ದ ಇದೀಗ ಪೋಷಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸರ್ ಎಂ ವಿಶ್ವೇಶ್ವರಯ್ಯ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಐಶ್ವರ್ಯ (17 ವರ್ಷ ) ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ವಿದ್ಯಾರ್ಥಿನಿ. ಕಾಲೇಜಿನ ಪ್ರಾಂಶುಪಾಲ ರಮೇಶ್ ಎಂಬಾತನ ವಿರುದ್ದ ಇದೀಗ ಅತ್ಯಾಚಾರ, ಕೊಲೆ ಆರೋಪ ಕೇಳಿಬಂದಿದೆ. ವಿದ್ಯಾರ್ಥಿನಿ ಐಶ್ವರ್ಯಳನ್ನು ಕೊಲೆ ಮಾಡಿ ನಂತರ ತನ್ನ ವಿರುದ್ಧ ಆರೋಪ ಬರಬಾರದು ಅನ್ನೋ ಕಾರಣಕ್ಕೆ ಆಕೆಯ ಶವವನ್ನು ಹಾಸ್ಟೆಲ್ ಕೊಠಡಿಯಲ್ಲಿ ನೇಣಿಗೆ ಹಾಕಿದ್ದಾರೆ ಎಂದು ಮೃತ ವಿದ್ಯಾರ್ಥಿನಿ ಫೋಷಕರು, ಸಂಬಂಧಿಕರು ಆರೋಪಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಬಂಧಿಕರು, ಪೋಷಕರು ವಸತಿ ಕಾಲೇಜಿಗೆ ಮುತ್ತಿಗೆ ಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿನಿ ಐಶ್ವರ್ಯ, ವಿಸಿಬಿ ಶಿಕ್ಷಣ ಸಂಸ್ಥೆ ಹಾಸ್ಟೆಲ್ನಲ್ಲಿ ವಾಸವಿದ್ದಳು. ಆಗಾಗ ಪ್ರಾಂಶುಪಾಲ ತನ್ನ ರೂಮಿಗೆ ಕರೆಸಿಕೊಳ್ಳುತ್ತಿದ್ದನಂತೆ. ಹೀಗಾಗಿ ನಿರಂತರವಾಗಿ ಲೈಂಗಿಕ ಕಿರುಕುಳ ನೀಡಿ ಪ್ರಾಂಶುಪಾಲರೇ ಕೊಲೆ ಮಾಡಿ ನೇಣು ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇನ್ನು ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಂಶುಪಾಲ ರಮೇಶ್ ವಿರುದ್ದ ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ.