ತನ್ನ ಅನೈತಿಕ ಸಂಬಂದಕ್ಕೆ ಅಡ್ಡಿಪಡಿಸಿದ ಗಂಡನನ್ನೇ ಕೊಲೆ ಮಾಡಿಸಿ ಚಟ್ಟ ಕಟ್ಟಿದ ಖತರ್ನಾಕ್ ಪತ್ನಿ
ಚಿಕ್ಕಬಳ್ಳಾಪುರ: ಗಂಡ ಹಾಗೂ ಮೂವರು ಮಕ್ಕಳಿದ್ರೂ, ಇಲ್ಲೊಬ್ಬ ವಿವಾಹಿತ ಮಹಿಳೆ ಪರಪುರುಷನೊಂದಿಗೆ ಅನೈತಿಕ ಸಂಬಂಧ ಬೆಳೆಸಿದ್ದಳು. ಆದ್ರೆ ತನ್ನ ಅನೈತಿಕ ಸಂಬಂಧಕ್ಕೆ ಗಂಡನೇ ಅಡ್ಡಿಯಾಗಿದ್ದನೆಂದು ಭಾವಿಸಿ, ಪ್ರಿಯಕರನ ಕೈಯಲ್ಲಿ ಗಂಡನನ್ನೇ ಕೊಲೆ ಮಾಡಿಸಿದ್ದಾಳೆ.
ಗಂಡನನ್ನು ಕೊಂದು, ಹೂತುಹಾಕಿ, ಏನೂ ಗೊತ್ತಿಲ್ಲದಂತೆ ಪೊಲೀಸ್ ಠಾಣೆಗೆ ಹೋಗಿ `ಸ್ವಾಮಿ ನನ್ನ ಗಂಡ ಕಾಣಿಸುತ್ತಿಲ್ಲ ಹುಡುಕಿಕೊಡಿ’ ಎಂದು ಸುಳ್ಳು ಕಂಪ್ಲೇಂಟ್ ಕೊಟ್ಟಿದ್ದಾಳೆ. ಕೊನೆಗೆ ನೌಟಂಕಿ ರಾಣಿಯ ಆಸಲಿಯತ್ತನ್ನ ಚಿಕ್ಕಬಳ್ಳಾಪುರ ಜಿಲ್ಲೆಯ ಚೇಳೂರು ಪೊಲೀಸರು ಬಯಲು ಮಾಡಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲೂಕಿನ ಪೋಲನಾಯಕನಪಲ್ಲಿ ನಿವಾಸಿ ನರಸಿಂಹಪ್ಪ ಕೊಲೆಯಾದ ವ್ಯಕ್ತಿ. ಅಲಮೇಲಮ್ಮ ಕೊಲೆ ಮಾಡಿಸಿದ ಪತ್ನಿ.
ಅಲಮೇಲಮ್ಮ – ನರಸಿಂಹಪ್ಪ ದಂಪತಿಗೆ ಮೂವರು ಮಕ್ಕಳು (ಇಬ್ಬರು ಹೆಣ್ಣು, ಓರ್ವ ಗಂಡು ಮಗ) ಇದ್ದಾರೆ. ಇಬ್ಬರು ಕೂಲಿ ಮಾಡಿಕೊಂಡು, ನೆಮ್ಮದಿಯ ಜೀವನ ನಡೆಸುತ್ತಿದ್ದರು. ಆದರೆ ನವೆಂಬರ್ 24ರಂದು ಈಕೆಯ ಗಂಡ ನರಸಿಂಹಪ್ಪ ಅಂಗಡಿಗೆ ಹೋಗಿ ಬರ್ತೀನಿ ಅಂತ ಹೋರಟವನೇ 5 ದಿನಗಳಾದ್ರೂ ಮನೆಗೆ ವಾಪಸ್ ಬರಲಿಲ್ಲ. ಇದರಿಂದ ಆತಂಕಗೊಂಡ ಅಲಮೇಲು ನೇರವಾಗಿ ಚೇಳೂರು ಪೊಲೀಸ್ ಠಾಣೆಗೆ ಹೋಗಿ ನವೆಂಬರ್ 29 ರಂದು ಗಂಡ ಮಿಸ್ಸಿಂಗ್ ದೂರು ನೀಡಿದ್ದಳು.
ದೂರಿನ ಆಧಾರದ ಮೇಲೆ ಕೇಸ್ ದಾಖಲಿಸಿ, ತನಿಖೆ ನಡೆಸಿದ್ದ ಪೊಲೀಸರು ಹೆಂಡತಿ ಅಲಮೇಲಮ್ಮನ ಮೇಲೆ ಅನುಮಾನ ಪಟ್ಟಿದ್ದರು. ಬಳಿಕ ಠಾಣೆಗೆ ಕರೆತಂದು ವಿಚಾರಣೆ ಮಾಡಿದಾಗ ಸತ್ಯ ಬಾಯ್ದಿಟ್ಟಿದ್ದಾಳೆ.
ಅಲಮೇಲಮ್ಮನ ಅಸಲಿ ಆಟ ಏನು? ಹೌದು.. ಅಲಮೇಲಮ್ಮನಿಗೆ ಪೋಲನಾಯಕನಪಲ್ಲಿ ಗ್ರಾಮದ ವೆಂಕಟೇಶ ಎನ್ನುವವನೊಂದಿಗೆ ಅನೈತಿಕ ಸಂಬಂಧವಿತ್ತು. ಇದೇ ವಿಚಾರಕ್ಕೆ ಮನೆಯಲ್ಲಿ ಆಗಾಗ್ಗೆ ಗಲಾಟೆ ನಡೆಯುತ್ತಿತ್ತು. ಇದರಿಂದ ರೊಚ್ಚಿಗೆದ್ದ ಅಲಮೇಲು ತನ್ನ ಗಂಡನ ಕಥೆ ಮುಗಿಸುವಂತೆ ಹೇಳಿದ್ದಾಳೆ. ನಂತರ ಪಕ್ಕಾ ಸ್ಕೆಚ್ ಹಾಕಿದ ವೆಂಕಟೇಶ ಸ್ನೇಹಿತ ಶ್ರೀನಾಥ್ ಜೊತೆಗೂಡಿ ನರಸಿಂಹಪ್ಪನಿಗೆ ಮದ್ಯ ಕುಡಿಸಲು ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾನೆ. ಮದ್ಯ ಕುಡಿಸಿ ಅಲ್ಲೇ ಕತ್ತು ಹಿಸುಕಿ ಕೊಂದು, ಪೊದೆಯೊಂದರಲ್ಲಿ ಶವವನ್ನ ಹೂತುಹಾಕಿದ್ದಾರೆ ಎಂಬ ಸತ್ಯವನ್ನ ಅಲಮೇಲು ತನಿಖೆ ವೇಳೆ ಬಾಯ್ದಿಟ್ಟಿದ್ದಾಳೆ.
ಸದ್ಯ ಶವ ಹೊರತೆಗೆಸಿರುವ ಪೊಲೀಸರು ಕಿಲಾಡಿ ಪತ್ನಿ ಅಲಮೇಲಮ್ಮ, ಪ್ರಿಯಕರ ವೆಂಕಟೇಶ್ ಹಾಗೂ ಕೊಲೆಗೆ ಸಾಥ್ ನೀಡಿದ ಸ್ನೇಹಿತ ಶ್ರೀನಾಥ್‌ನನ್ನ ಬಂಧಿಸಿ ಜೈಲಿಗಟ್ಟಿದ್ದಾರೆ. ಆದರೆ ತಮ್ಮದಲ್ಲದ ತಪ್ಪಿಗೆ ಮೂವರು ಮಕ್ಕಳು ಅನಾಥರಾಗುವಂತಾಗಿದೆ.