ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಬೇಕೆಂದು ಒತ್ತಾಯಿಸಿ ಭಟ್ಕಳ ಮೊಗೇರ ಸಮಾಜದ ಹೋರಾಟಕ್ಕೆ 1 ವರ್ಷ – ಜಿಲ್ಲಾಧಿಕಾರಿ ಕಾರಿಗೆ ಅಡ್ಡ ಕುಳಿತು ಪ್ರತಿಭಟನೆ
ಭಟ್ಕಳ-ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಬೇಕೆಂದು ಒತ್ತಾಯಿಸಿ ಕಳೆದ ಒಂದು ವರ್ಷಗಳಿಂದ ಪ್ರತಿಭಟನೆ ನಡೆಸುತ್ತಿರುವ ಇಲ್ಲಿನ ಮೊಗೇರ ಸಮಾಜದವರು ಗುರುವಾರ ಪ್ರತಿಭಟನಾ ಸ್ಥಳಕ್ಕಾಗಮಿಸಿದ್ದ ಜಿಲ್ಲಾಧಿಕಾರಿಗಳ ಕಾರು ತೆಗೆಯದಂತೆ ಅಡ್ಡಗಟ್ಟಿ ಗಂಟೆಗಟ್ಟಲೆ ಪ್ರತಿಭಟಿಸಿರುವ ಘಟನೆ ನಡೆದಿದೆ.
ತಾಲೂಕಾ ಆಡಳಿತ ಸೌಧದಲ್ಲಿ ಮೊಗೇರ ಸಮಾಜದವರು ನಿರಂತರವಾಗಿ ಒಂದು ವರ್ಷಗಳಿಂದ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆ ಆರಂಭವಾಗಿ ಗುರುವಾರಕ್ಕೆ ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಉಗ್ರ ಪ್ರತಿಭಟನೆ ನಡೆಸಲು ಪ್ರತಿಭಟನಾಕಾರರು ಯೋಜನೆ ರೂಪಿಸಿದ್ದರು. ಈ ನಿಟ್ಟಿನಲ್ಲಿ ಪ್ರತಿಭಟನಾಕಾರರನ್ನು ಸಮಾಧಾನಪಡಿಸಲು ಕಾರವಾರದಿಂದ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಕೂಡ ಭಟ್ಕಳಕ್ಕೆ ತೆರಳಿದ್ದರು.
ಒಂದು ವರ್ಷದಿಂದ ಪ್ರತಿಭಟನೆ ನಡೆಸುತ್ತಿದ್ದರೂ ಪ್ರತಿಭಟನೆಗೆ ಸ್ಪಂದಿಸದೆ ಇರುವ ಹಿನ್ನೆಲೆಯಲ್ಲಿ ಮೊಗೇರ ಸಮಾಜದ ಮುಖಂಡರು ಹಾಗೂ ಪ್ರತಿಭಟನಕಾರರು ಸ್ಥಳಕ್ಕೆ ಅಹವಾಲು ಆಲಿಸಲು ಆಗಮಿಸಿದ್ದ ಜಿಲ್ಲಾಧಿಕಾರಿಗಳ ಮುಂದೆ ತಮ್ಮ ಆಕ್ರೋಶವನ್ನು ಹೊರಹಾಕಿದರು.
ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿಗಳು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ, ಬಳಿಕ ತಾಲೂಕಾ ಆಡಳಿತ ಸೌಧದಲ್ಲಿರುವ ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿದರು. ಇದಕ್ಕೆ ಸಮಾಧಾನಗೊಳ್ಳದ ಪ್ರತಿಭಟನಾಕಾರರು ಡೌನ್ ಡೌನ್ ಡಿಸಿ ಎಂದು ಘೋಷಣೆಗಳನ್ನು ಕೂಗಿ ಕಚೇರಿಯನ್ನು ಸುತ್ತುವರೆದರು. ಪಾರ್ಕಿಂಗ್ನಲ್ಲಿದ್ದ ಜಿಲ್ಲಾಧಿಕಾರಿಗಳ ಕಾರಿನ ಮುಂಭಾಗ ಕುಳಿತ ಪ್ರತಿಭಟನಾಕಾರರು ಕೆಲ ಹೊತ್ತು ಕಾರು ತೆಗೆಯದಂತೆ ಅಡ್ಡಗಟ್ಟಿ ನ್ಯಾಯಕ್ಕಾಗಿ ಘೋಷಣೆಗಳನ್ನು ಕೂಗಿದರು. ಇದನ್ನು ಗಮನಿಸಿದ ಡಿವೈಎಸ್ಪಿ ಶ್ರೀಕಾಂತ ಸ್ಥಳಕ್ಕೆ ಬಂದು ಪ್ರತಿಭಟನಾಕಾರನ್ನು ಚದುರಿಸಿ ಮುಂದಾಗುವ ಅನಾಹುತವನ್ನು ತಪ್ಪಿಸಿದರು.