ಬಿಜೆಪಿಯವರದ್ದು ಬೋಗಸ್, ನಕಲಿ ಭಕ್ತಿ: ಸಚಿವ ಮಂಕಾಳು ವೈದ್ಯ
ಕಾರವಾರ: ಬಿಜೆಪಿಯವರು ಗಲಭೆ ಮಾಡದೆ ಯಾವ ಎಲೆಕ್ಷನ್ ಗೆದ್ದಿದ್ದಾರೆ. ಅವರು ಚುನಾವಣೆಗೋಸ್ಕರ ಏನು ಬೇಕಾದರೂ ಮಾಡುವುದಕ್ಕೆ ಸಿದ್ದರಿದ್ದಾರೆ ಎಂದು ಬಂದರು ಮತ್ತು ಮೀನುಗಾರಿಕಾ ಸಚಿವ ಮಂಕಾಳು ವೈದ್ಯ ಕಾರವಾರದಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ಮಾಡಿದರು.
ಕಾರವಾರದಲ್ಲಿ ನೂತನವಾಗಿ ನಿರ್ಮಿಸಿದ ಅರಣ್ಯ ಭವನವನ್ನು ಸೋಮವಾರ ಉದ್ಘಾಟನೆ ಮಾಡಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದರು.
ಬಿಜೆಪಿಯವರಿಗೆ ಮೂರು ಅಜೆಂಡಾಗಳಿವೆ. ಸುಳ್ಳು ಹೇಳುವುದ, ಗಲಭೆ ಮಾಡುವುದು, ದೇವರ ಹೆಸರಲ್ಲಿ ಸುಳ್ಳು ಹೇಳಿಕೊಂಡು ರಾಜಕಾರಣ ಮಾಡುವುದು ಎಂದು ಸಚಿವ ವೈದ್ಯ ಟೀಕಿಸಿದರು.
ರಾಮನ ನಿಜಭಕ್ತರಾದರೇ ಬಿಜೆಪಿ ಹೀಗೆ ಮಾಡುತ್ತಿರಲಿಲ್ಲ. ನಾನು ಕೂಡಾ ಶ್ರೀರಾಮನ ಭಕ್ತ. ನಾನು ಭಟ್ಕಳದಲ್ಲಿ ರಾಮ ಮಂದಿರ ಕಟ್ಟಿಸಿದ್ದೇನೆ. ಶ್ರೀರಾಮ ಸಮಸ್ತ ಹಿಂದುಗಳ ಆರಾಧ್ಯ. ಕೇವಲ ಬಿಜೆಪಿಗೆ ಮಾತ್ರ ಅಲ್ಲ ಎಂದರು.
ರಾಮ ಮಂದಿರ ಉದ್ಘಾಟನೆಗೆ ಅಕ್ಷತೆ ಕೊಟ್ಟು, ಮಂತ್ರಾಕ್ಷತೆ ಕೊಟ್ಟು ಕರೆಯುವುದೇನೋ ಸರಿ, ಮೋದಿ ಪೋಟೋ ಹಾಕಿ ಪ್ರಚಾರ ಮಾಡುವುದು ಏಕೆ? ಇದು ರಾಜಕೀಯ ಲಾಭಕ್ಕಾಗಿ ಅಲ್ಲವೇ ಎಂದು ಸಚಿವ ಪ್ರಶ್ನಿಸಿದರು.
ಅಕ್ಷತೆ ಕೊಡುವಾಗ ಮೋದಿ ವಿಚಾರ ಏಕೆ ಹೇಳುತ್ತಾರೆ, ಯಾಕೆ ಮೋದಿ, ಯೋಗಿಯ ಫೋಟೋ ಕಟೌಟ್ ಹಾಕಿದ್ದಾರೆ ಎಂಬುದು ಜನರಿಗೆ ಅರ್ಥವಾಗುತ್ತಿದೆ. ಮಂದಿರಕ್ಕೆ ಯಾರ ದುಡ್ಡು? ಸಾರ್ವಜನಿಕರು ನೀಡಿದ ಹಣವದು. ನಾವು ಕೂಡ ಮಂದಿರ ನಿರ್ಮಾಣಕ್ಕೆ ಹಣ ಕೊಟ್ಟಿದ್ದೇವೆ ಎಂದ ಸಚಿವ ವೈದ್ಯ , ಈಗ ನಡೆಸಿರುವ ನಾಟಕವನ್ನು ಬಿಜೆಪಿಯವರು ಬಂದ್ ಮಾಡುವುದು ಒಳ್ಳೆಯದು ಎಂದರು.
ಬಿಜೆಪಿಯವರದ್ದು ಬೋಗಸ್ ಭಕ್ತಿ. ನಿಜವಾದ ಭಕ್ತರು ಗಲಾಟೆ ಮಾಡುವುದಿಲ್ಲ. ರಾಜ್ಯದಲ್ಲಿ ನಾವು ಕೂಡ ಪೊಲೀಸ್ ಬಂದೋಬಸ್ತ್ ಮಾಡಿದ್ದೇವೆ ಎಂದು ಬಂದರು ಮತ್ತು ಮೀನುಗಾರಿಕೆ ಸಚಿವ ಮಂಕಾಳು ವೈದ್ಯ ಹೇಳಿದರು.