ಹೊನ್ನಾವರದಲ್ಲಿ ಅಕ್ರಮ ಮರಳುಗಾರಿಕೆ ನಡೆಯುವ ಪ್ರದೇಶಕ್ಕೆ ದಿಢೀರ್ ಭೇಟಿ ನೀಡಿದ ಭೂ ಮತ್ತು ಗಣಿ ಇಲಾಖೆಯ ಅಧಿಕಾರಿ ಆಶಾ
ಹೊನ್ನಾವರ: ತಾಲೂಕಿನ ಕೊಡಾಣಿ ಮತ್ತು ಮಾಳ್ಕೋಡ ಸೇತುವೆ ಹತ್ತಿರ ಅಕ್ರಮ ಮರಳುಗಾರಿಕೆ ನಡೆಯುವ ಪ್ರದೇಶಕ್ಕೆ ದಿಢೀರ್ ಭೇಟಿ ನೀಡಿದ ಭೂ ಮತ್ತು ಗಣಿ ಇಲಾಖೆಯ ಅಧಿಕಾರಿ ಆಶಾ ಅಲ್ಲಿಯ ಅಕ್ರಮ ಮರಳುಗಾರಿಕೆ ತಡೆಯಲು, ಮರಳು ಸಾಗಾಟ ಮಾಡಲು ಸಾಧ್ಯವಾಗದಂತೆ ಜೆಸಿಬಿ ಯಂತ್ರ ಬಳಸಿ ಕಂದಕ ನಿರ್ಮಾಣ ಮಾಡಿರುವ ಬೆಳವಣಿಗೆ ಗುರುವಾರ ನಡೆದಿದೆ.
ಇತ್ತೀಚಿಗೆ ಮರಳು ಸಾಗಾಟಕ್ಕೆ ಪರವಾನಿಗೆದಾರರಿಗೆ ಅವಕಾಶ ನೀಡಲಾಗಿದ್ದರೂ ಕೂಡ ಅಕ್ರಮ ಮರಳುಗಾರಿಕೆ ತಡೆಯುವ ಪ್ರಯತ್ನ ಸ್ಥಳೀಯ ಅಧಿಕಾರಿಗಳು ಮಾಡಿರಲಿಲ್ಲ. ಯತೇಚ್ಛವಾಗಿ ಅಕ್ರಮ ಮರಳು ಸಾಗಾಟ ನಡೆಯುತ್ತಲೆ ಇದೆ. ಪರವಾನಿಗೆದಾರರಿಗಿಂತ, ಅಕ್ರಮ ಮರಳು ಸಾಗಾಟ ಮಾಡುವವರೇ ಕಡಿಮೆ ಮೊತ್ತಕ್ಕೆ ಸಾಗಾಟ ಮಾಡುತ್ತಾರೆ ಎನ್ನುವ ಆರೋಪವು ಕೇಳಿ ಬರುತ್ತಿದೆ. ಹೀಗಿರುವಾಗ ಸ್ಥಳೀಯ ಅಧಿಕಾರಿಗಳ ನಿರ್ಲಕ್ಷಕ್ಕೆ ಅಕ್ರಮ ಮರಳು ಸಾಗಾಟ ಮುಂದುವರಿದಿತ್ತು. ಆಗಾಗ ಕಾರವಾರದಿಂದ ಬರುವ ಭೂ ಮತ್ತು ಗಣಿ ಅಧಿಕಾರಿ ದಾಳಿ ಮಾಡಿದಾಗ ಮಾತ್ರ ಅಕ್ರಮ ಬೆಳಕಿಗೆ ಬರುತ್ತಿದೆ. ಅದರಂತೆ ಗುರುವಾರ ಕೂಡ ದಾಳಿ ನಡೆದಿದೆ. ಅಕ್ರಮ ತಡೆಗೆ ಕಂದಕ ನಿರ್ಮಿಸಿ ಹೋಗಿದ್ದಾರೆ. ಅವರು ಮರಳಿದ ನಂತರ ಪುನಃ ಕಂದಕ ಮುಚ್ಚಿದರೂ ಆಶ್ಚರ್ಯವಿಲ್ಲ ಎನ್ನುವ ಮಾತುಗಳು ಜನ ಸಾಮಾನ್ಯರಿಂದ ಕೇಳಿ ಬರುತ್ತಿದೆ.
ತಾಲೂಕಿನ ಹಲವು ಕಡೆ ಅಕ್ರಮ ಮರಳುಗಾರಿಕೆ ಎಗ್ಗಿಲ್ಲದೆ ಹಬ್ಬಿಕೊಂಡಿದ್ದು, ಯಾವುದೇ ಆತಂಕವಿಲ್ಲದೆ ರಾಜಾರೋಷವಾಗಿ ನಡೆದುಕೊಂಡು ಬಂದಿತ್ತು. ತಾಲೂಕಿನ ಜನತೆಗೆ ಅಕ್ಕಪಕ್ಕದ ಜನರ ಬಳಕೆಗೆ ಬೇಕಾದ ಪ್ರಮಾಣಕ್ಕಿಂತ ಹೆಚ್ಚು ಮರಳು ಸಾಗಾಣಿಕೆ ನದಿಯ ಒಡಲು ಬರಿದಾಗುವ ಮಟ್ಟಿಗೆ ಉದ್ಯಮ ಬೆಳೆದು ನಿಂತಿದೆ. ಕಳೆದ ಕೆಲವು ವರ್ಷಗಳಿಂದ ಶರಾವತಿ ನದಿ ಸಾವಿರಾರು ಜನರ ಬದುಕು ಕಟ್ಟಿಕೊಳ್ಳಲು ತನ್ನ ಒಡಲು ಬರಿದಾಗಿಸಿಕೊಂಡಿದೆ.
ತಮ್ಮ ಬದುಕಿನಹಾದಿಗೆ ಉದ್ಯೋಗವಾಗಿ ಕಂಡುಕೊಂಡ ಮರಳುಗಾರಿಕೆ, ಹಂತ ಹಂತವಾಗಿ ದೊಡ್ಡ ಉದ್ಯಮ ಅನ್ನುವುದಕ್ಕಿಂತ ಮಾಫಿಯಾ ಮಾದರಿಯಲ್ಲಿ ವಿಸ್ತರಣೆಗೊಳ್ಳುತ್ತಾ ಹೋಯಿತು. ಉಳ್ಳವರು ಕೂಡ ಇದರಲ್ಲಿ ತೊಡಕಿಕೊಂಡು,ಮಧ್ಯಮ ವರ್ಗದವರು ಕಾರ್ಮಿಕರಾದರೆ, ಉಳ್ಳವರು ಮಾಲೀಕರಾದರು. ಸರಕಾರವು ಅನುಮತಿ ಕೊಟ್ಟಿತು. ಅನುಮತಿ ಪಡೆದವರ ಮರಳುಗಾರಿಕೆ ಪ್ರಾರಂಭವಾದ ಮೇಲೆ ಒಂದು ಹಂತದಲ್ಲಿ ಸೂಸುತ್ರವಾಗಿ ನಡೆದುಕೊಂಡು ಬಂದಿತ್ತು. ಮುಂದೆ ಸಾಗಿದಂತೆ ಈ ಉದ್ಯಮ ಸಕ್ರಮಕ್ಕಿಂತ ಅಕ್ರಮದ ಆರ್ಭಟವೇ ಹೆಚ್ಚಾಗುತ್ತಾ ಹೋಯಿತು. ಅದು ತಾಲೂಕು, ಜಿಲ್ಲೆ, ಹೊರ ಜಿಲ್ಲೆ, ಹೊರ ರಾಜ್ಯಕ್ಕೂ ವಿಸ್ತಾರಗೊಂಡಿತು. ಈ ಉದ್ಯಮ ಒಂದು ವ್ಯವಸ್ಥೆಯನ್ನೇ ನಿಯಂತ್ರಣ ಮಾಡುವಷ್ಟರ ಮಟ್ಟಿಗೆ ಗಟ್ಟಿ ಬೇರು ಊರಿದೆ.
ಸರಕಾರದ ಅನುಮತಿ ಪಡೆದ ಮರಳುಗಾರಿಕೆಗೆ ಸರಿಯಾಗಿ ಅವಕಾಶವನ್ನೇ ಕೊಡುವುದಿಲ್ಲ. ಅವರು ಎಷ್ಟೇ ಮನವಿ, ಪ್ರಯತ್ನ ಮಾಡಿದರು ಸರಕಾರ ಅವಕಾಶ ಕೊಡುತ್ತಿಲ್ಲ. ಅವರು ಉಧ್ಯಮ ನಡೆಸುವ ಹಾಗೂ ಇಲ್ಲ, ಬಿಡುವ ಹಾಗೂ ಇಲ್ಲ, ಆದರೆ ಅಕ್ರಮ ಮರಳುಗಾರಿಕೆಗೆ ಯಾವುದೇ ನಿಯಂತ್ರಣವೇ ಇಲ್ಲದೆ ಎಗ್ಗಿಲ್ಲದೆ ಸಾಗಿತ್ತು. ಆಗಾಗ ಅಂತಹ ಅಧಿಕಾರಿ ಬಂದಾಗ ದಾಳಿ ನಡೆದು ಸ್ವಲ್ಪ ಮಟ್ಟಿಗೆ ಸುದ್ದಿ ಆಗಿದ್ದು ಬಿಟ್ಟರೆ, ಸಂಪೂರ್ಣ ತಡೆಯಲು ಸಾಧ್ಯವಾಗಿಲ್ಲ.
ರಾತ್ರಿಯಾಯಿತೆಂದರೆ ಓಡಾಡುವ ವೇಗದ ವಾಹನ, ಅದನ್ನು ಕಾಯಲು ದಾರಿ ಉದ್ದಕ್ಕೂ ಯುವಕರ ದಂಡು, ಅವರೆಲ್ಲ ರಕ್ಷಕರ ಬಂಧು, ಆತಂಕ ವಿಲ್ಲದೆ ಸಾಗುತ್ತಿದೆ ಲಾರಿಯ ಹಿಂಡು, ಇದು ಪ್ರತಿದಿನದ ದಿನಚರಿ, ಆಡಳಿತ ವ್ಯವಸ್ಥೆ ಅವರ ರಕ್ಷಣೆಗೆ ನಿಂತಿದೆ ಅನ್ನುವುದು ಗೊತ್ತಿದ್ದರು, ಸಾಕ್ಷಿ ಇಲ್ಲದ ಸತ್ಯವಾಗಿದೆ. ಅದರಲ್ಲೂ ಈ ಉದ್ಯಮಕ್ಕೆ ರಾಜಕಾರಣಿಗಳ ಅಭಯ ಹಸ್ತ ಇರುವುದು ಬಹಿರಂಗ ಸತ್ಯ, ಆಗಾಗ ಭೂ ಮತ್ತು ಗಣಿ ಅಧಿಕಾರಿ ಆಶಾ ದಾಳಿ ಮಾಡಿದಾಗ ಮಾತ್ರ ಸುದ್ದಿ ಆಗುತ್ತಿದೆ ಅನ್ನುವುದು ಬಿಟ್ಟರೆ, ಉಳಿದ ಅಧಿಕಾರಿಗಳು ಮರಳು ಮಾಪಿಯಾದ ನೆರಳಲ್ಲಿ ತಂದು ಕಂಡಂತೆ ಗೋಚರಿಸುತ್ತಿದೆ.