ಅರ್ಜುನ್ ಪ್ರಾಣ ರಕ್ಷಣೆಗಾಗಿ ಮಿಲಿಟರಿ ಪಡೆಗಳಿಂದ ಕಾರ್ಯಾಚರಣೆ : ಕೇರಳದ ಲಾರಿ ಚಾಲಕ ಅರ್ಜುನ್ ಜೀವದ ಉಳಿವಿಗಾಗಿ ಇದೀಗ ಎಲ್ಲೆಡೆ ಪ್ರಾರ್ಥನೆ
ಅಂಕೋಲಾ: ಗುಡ್ಡ ಕುಸಿತದ ಕಾರಣಕ್ಕೆ ರಾಜ್ಯದೆಲ್ಲೆಡೆ ಪ್ರಸಿದ್ಧಿ ಪಡೆದಿರುವ ತಾಲೂಕಿನ ಶಿರೂರು ಇದೀಗ, ಪಕ್ಕದ ಕೇರಳ ರಾಜ್ಯದಲ್ಲಿಯೂ ಎಲ್ಕರ ಬಾಯಲ್ಲಿ ಕೇಳಿಬರುತ್ತಿದೆ. ಗುಡ್ಡ ಕುಸಿತದಲ್ಲಿ ಕಾಣೆಯಾಗಿದ್ದ ಬೆಂಜ್ ಲಾರಿ ಚಾಲಕ ಅರ್ಜುನ್ ಜೀವದ ಉಳಿವಿಗಾಗಿ ಇದೀಗ ಎಲ್ಲೆಡೆ ಪ್ರಾರ್ಥನೆಗಳು ಕೇಳಿಬರುತ್ತಿದೆ.
ಕೇರಳ ಮೂಲದ ಲಾರಿ ಚಾಲಕ ಅರ್ಜುನ್ ಪ್ರತಿ ಬಾರಿಯಂತೆ ಈ ಬಾರಿಯೂ ಲೋಡ್ ತುಂಬಿಕೊಂಡು ಭಾರತ್ ಬೆಂಜ್ ಕಂಪನಿಯ ಲಾರಿಯಲ್ಲಿ ಬಂದಿದ್ದನು. ಸಾಮಾನ್ಯವಾಗಿ ಇಲ್ಲಿರುವ ಡಾಬಾದಲ್ಲಿ ತಿಂಡಿ ತಿಂದು ಹೋಗುತ್ತಿದ್ದನು ಎಂದು ಲಾರಿ ಮಾಲೀಕ ಕೇರಳ ಮೂಲದ ಅಬ್ದುಲ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಮೊದಲು ಆತನ ಮೊಬೈಲ್ ಗೆ ಸಂಪರ್ಕ ಮಾಡಿದಾಗ ನಂಬರ್ ಸ್ವಿಚ್ ಆಫ್ ಎಂದು ಬಂದಿತ್ತು. ನಂತರ ಮಾಧ್ಯಮದ ಮೂಲಕ ಇಲ್ಲಿಯ ಗುಡ್ಡ ಕುಸಿತದ ಮಾಹಿತಿ ತಿಳಿದುಕೊಂಡೆ. ನಂತರದಲ್ಲಿ ಅರ್ಜುನ್ ಸಂಪರ್ಕಿಸಲು ಸಾಧ್ಯವಾಗದ ಕಾರಣ, ಬೆಂಜ್ ಕಂಪನಿಯವರ ಸಹಾಯದಿಂದ ಲಾರಿಯ ಲೊಕೆಷನ್ ಪತ್ತೆ ಹಚ್ಚಲಾಗಿದ್ದು, ಲಾರಿಯು ಗುಡ್ಡ ಕುಸಿದ ಭಾಗದಲ್ಲಿಯೇ ಇರುವಂತೆ ಲೊಕೆಷನ್ ತೋರಿಸುತ್ತಿದೆ. ಜೊತೆಗೆ ಎರಡು ಬಾರಿ ಚಾಲಕ ಅರ್ಜುನ್ ಮೊಬೈಲ್ ಸ್ವಿಚ್ ಆನ್ ಆಗಿತ್ತು ಎಂದು ಆತನ ಪತ್ನಿ ಹೇಳಿದ್ದಾರೆಂದು ಅಬ್ದುಲ್ ಮಾಹಿತಿ ನೀಡಿದ್ದಾರೆ. ಲಾರಿ ಚಾಲಕನ ಕ್ಯಾಬಿನ್ ಎಸಿ ಕ್ಯಾಬಿನ್ ಆಗಿದ್ದು, ಮೂರು ದಿನಗಳಿಗೆ ಸಾಕಾಗುವಷ್ಟು ನೀರು ಇದ್ದಿರಬಹುದು. ತಿಂಡಿಯು ಇರಬಹುದು. ಹಾಗಾಗಿ ಚಾಲಕ ಅರ್ಜುನ್ ಬದುಕಿರುವ ಸಾಧ್ಯತೆ ದಟ್ಟವಾಗಿದೆ. ದಯಮಾಡಿ ಆದಷ್ಟು ಬೇಗನೇ ಚಾಲಕ ಅರ್ಜುನ್ ಜೀವ ಉಳಿವಿಗಾಗಿ ಕ್ಷಿಪ್ರ ಕಾರ್ಯಾಚರಣೆ ಮಾಡುವಂತೆ ಅವರು ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ. ಕೇರಳದ ಕೆಲ ಮಾಧ್ಯಮ ತಂಡ, ಚಾಲಕ ಅರ್ಜುನ್ ಸಂಬಂಧಿಕರೂ ಸಹ ಘಟನಾ ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ.
ಶಾಸಕ ಸೈಲ್, ಸಚಿವ ವೈದ್ಯರ ನಡುವೆ ಮಾತಿನ ಚಕಮಕಿ:
ವಿಧಾನ ಸಭೆ ಅಧಿವೇಶನ ಮುಗಿಸಿ ಶನಿವಾರ ಸ್ಥಳಕ್ಕೆ ಆಗಮಿಸಿದ ಶಾಸಕ ಸತೀಶ್ ಸೈಲ್ ಗೆ ಗುಡ್ಡ ಕುಸಿತ ಪ್ರದೇಶಕ್ಕೆ ತೆರಳಲು ಜಿಲ್ಲಾಡಳಿತ ಸುರಕ್ಷತೆಯ ನೆಪಯೊಡ್ಡಿ ತಡೆಯೊಡ್ಡಿದೆ ಎನ್ನಲಾಗಿದ್ದು, ಇದಕ್ಕೆ ಕೆಂಡಾಮಂಡಲರಾದ ಶಾಸಕ ಸೈಲ್, ಸಚಿವ ವೈದ್ಯರ ಎದುರೇ ತೀವ್ರ ಅಸಮಾಧಾನವನ್ನು ಹೊರಹಾಕಿದರು. ನಂತರದಲ್ಲಿ ಅಲಿಂದ ಗುಡ್ಡ ಕುಸಿತದ ಸ್ಥಳಕ್ಕೆ ನಡೆದುಕೊಂಡೇ ಹೋಗುವುದಾಗಿ ಸವಾಲೆಸೆದು, ಬಂಧಿಸುವುದಾದಲ್ಲಿ ಬಂಧಿಸಲಿ ಎಂದು ವಾಗ್ದಾಳಿ ನಡೆಸಿದರು. ಜೊತೆಗೆ ಘಟನಾ ಸ್ಥಳಕ್ಕೆ ಶನಿವಾರ ಬೆಳಗ್ಗಿನಿಂದಲೇ ಮಾಧ್ಯಮಗಳಿಗೆ ನಿರ್ಬಂಧ ಹಾಕಿರುವ ಜಿಲ್ಲಾಡಳಿತದ ಕ್ರಮವನ್ನು ವಿರೋಧಿಸಿ, ಇದು ತಪ್ಪು. ಜನರಿಗೆ ಯಾವ ಸಂದೇಶ ಕೊಡಲು ಹೊರಟಿದ್ದೀರಿ ಎಂದು ಸಚಿವ ಮಂಕಾಳು ವೈದ್ಯರನ್ನು ಖಾರವಾಗಿ ಪ್ರಶ್ನಿಸಿದರು.