ಕುಂದಾಪುರ: ಗಂಗೊಳ್ಳಿ ಶ್ರೀಮಹಾಂಕಾಳಿ ಅಮ್ಮನವರ ದೇವಸ್ಥಾನ ದೇವಿಗೆ ಅರ್ಪಿಸಿದ 21 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಗಂಗೊಳ್ಳಿ ಪೊಲೀಸರು ಬಂಧಿಸಿದ್ದಾರೆ.
ಗಂಗೊಳ್ಳಿ ಖಾರ್ವಿಕೇರಿ ಶ್ರೀಮಹಾಂಕಾಳಿ ದೇವಸ್ಥಾನದ ಅಚರ್ಕ, ಶಿರಸಿ ಸಾಲಕಣಿ ಗ್ರಾಮದ ಮೂರೆಗಾರ ನಿವಾಸಿ ನರಸಿಂಹ ಭಟ್(43) ಬಂಧಿತ ಆರೋಪಿ.
ಮಹಾಂಕಾಳಿ ದೇವಸ್ಥಾನದಲ್ಲಿ ದೇವಿಯ ಮೂರ್ತಿಗೆ ಆಡಳಿತ ಮಂಡಳಿ ಹಾಗೂ ಭಕ್ತಾದಿಗಳು ಸೇವೆ, ಹರಕೆ ರೂಪದಲ್ಲಿ ನೀಡಿದ ಚಿನ್ನಾಭರಣಗಳನ್ನು ದೇವರ ಮೂರ್ತಿಗೆ ಅಲಂಕಾರ ಮಾಡಿದ ರೀತಿಯಲ್ಲಿ ಪ್ರತಿದಿನ ದೇವರ ಮೂರ್ತಿಯ ಮೈಮೇಲೆ ಇರುತ್ತಿತ್ತು. ಸೆ. 21 ರಂದು ಸಂಜೆ 7 ಗಂಟೆ ಸುಮಾರಿಗೆ ದೇವಸ್ಥಾನದ ಗರ್ಭಗುಡಿಯಲ್ಲಿ ಪೂಜೆ ಮಾಡುತ್ತಿದ್ದ ಅರೊಪಿ ಅರ್ಚಕನಲ್ಲಿ ನವರಾತ್ರಿ ಉತ್ಸವದ ಸಲುವಾಗಿ ದೇವರ ಮೈಮೇಲಿದ್ದ ಚಿನ್ನಾಭರಣಗಳನ್ನು ಶುದ್ದಚಾರ ಮಾಡಲು ನೀಡುವಂತೆ ಹೇಳಿ ಪಡೆದುಕೊಂಡಾಗ ಆ ಆಭರಣಗಳು ಈ ಹಿಂದೆ ಇದ್ದ ಆಭರಣಗಳಂತೆ ಇರದೇ ಬೇರೆ ರೀತಿಯಲ್ಲಿ ಇದ್ದ ಹಾಗೂ ಅಸಲಿ ಚಿನ್ನದಂತೆ ಕಂಡುಬಂದಿಲ್ಲ. ಈ ಬಗ್ಗೆ ಅಸಲಿ ಚಿನ್ನಾಭರಣಗಳನ್ನು ತಾನು ತೆಗೆದಿರುವುದಾಗಿ ಒಪ್ಪಿಕೊಂಡು ಅವುಗಳನ್ನು ತಾನು ವೈಯುಕ್ತಿಕವಾಗಿ ಸ್ವಂತಕ್ಕೆ ಬಳಸಿಕೊಂಡ ಬಗ್ಗೆ ತಿಳಿಸಿದ್ದಾನೆ.
ಅಂದಾಜು 3 ಲಕ್ಷ 20 ಸಾವಿರ ಮೌಲ್ಯದ 40 ಗ್ರಾಂ ತೂಕದ ಚಿನ್ನದ ಜೋಬಿನ ಸರ, 5 ಲಕ್ಷ 84 ಸಾವಿರ ಮೌಲ್ಯದ 73 ಗ್ರಾಂ ತೂಕದ ಹವಳ ಸೇರಿದ ಚಿನ್ನದ ಕಾಸಿ ತಾಳಿ ಸರ, , 5 ಲಕ್ಷ 84 ಸಾವಿರ ಮೌಲ್ಯದ 73 ಗ್ರಾಂ ತೂಕದ ಚಿನ್ನದ ಕರಿಮಣಿ ಸರ, 5 ಲಕ್ಷ 12 ಸಾವಿರ ಮೌಲ್ಯದ 64 ಗ್ರಾಂ ತೂಕದ ಚಿನ್ನದ ನಕ್ಲೇಸ್, 48 ಸಾವಿರದ 6 ಗ್ರಾಂ ತೂಕದ 3 ಚಿನ್ನದ ತಾಳಿ, 64 ಸಾವಿರದ 8 ಗ್ರಾಂ ತೂಕದ ಚಿನ್ನದ ಚೈನ್ ಸರ ಸಹಿತ ಒಟ್ಟು ರೂ 21 ಲಕ್ಷದ 12 ಸಾವಿರ ಮೌಲ್ಯದ 264 ಗ್ರಾಂ(33 ಪವನ್) ತೂಕದ ಚಿನ್ನಾಭರಣಗಳನ್ನು ಕಳವುಗೈದಿದ್ದಾನೆ.