ಶಿರಸಿ: ರೈತರಿಂದ ಲಂಚ ಪಡೆದ ಅರಣ್ಯ ರಕ್ಷಕನಿಗೆ ನ್ಯಾಯಾಲಯ ಎರಡು ವರ್ಷ ಜೈಲು ಹಾಗೂ ಎರಡು ಸೆಕ್ಷನ್ ಅಡಿ ತಲಾ ತಲಾ 5 ಸಾವಿರ ರೂಪಾಯಿಗಳಂತೆ ಒಟ್ಟು 10 ಸಾವಿರ ರೂ ದಂಡ ವಿಧಿಸಿದೆ.
ಬೆಳಗಾವಿಯ ಬೈಲಹೊಂಗಲದ ಗುರುಶಾಂತ ಸಂಕಣ್ಣನವರ್ 2017ರಲ್ಲಿ ಬನವಾಸಿ ವಲಯ ವ್ಯಾಪ್ತಿಯಲ್ಲಿ ಅರಣ್ಯ ರಕ್ಷಕರಾಗಿದ್ದರು. ಎಕ್ಕಂಬಿ ಹತ್ತಿರದ ಶಿವಳ್ಳಿ ಅರಣ್ಯ ರಕ್ಷಕರ ವಸತಿಗೃಹದಲ್ಲಿ ಅವರು ವಾಸವಾಗಿದ್ದರು.
2017ರ ಎಪ್ರಿಲ್ ತಿಂಗಳಿನಲ್ಲಿ ಕುಡಿಯಲು ನೀರಲ್ಲದ ಕಾರಣ ರೈತರೊಬ್ಬರು ಅರಣ್ಯ ಪ್ರದೇಶದಲ್ಲಿ ಬಾವಿ ತೆಗೆಯುತ್ತಿದ್ದರು. ಅದಕ್ಕೆ ಅರಣ್ಯ ರಕ್ಷಕ ಗುರುಶಾಂತ ಸಂಕಣ್ಣನವರ್ ತಕರಾರು ಮಾಡಿದ್ದರು. ಪ್ರಕರಣ ದಾಖಲಿಸುವೆ ಎಂದು ಬೆದರಿಸಿದ್ದರು. ನಂತರ `ಸಂಜೆ ಮನೆ ಹತ್ತಿರ ಬಂದು ಭೇಟಿಯಾಗಿ’ ಎಂದು ಹೇಳಿ ಹೋಗಿದ್ದರು. ಏಪ್ರಿಲ್ 8ರಂದು ರೈತರು ಅವರ ಮನೆ ಬಳಿ ಹೋದಾಗ 10 ಸಾವಿರ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಚೌಕಾಸಿ ಮಾತುಕಥೆಯಲ್ಲಿ 5 ಸಾವಿರಕ್ಕೆ ಒಪ್ಪಿಕೊಂಡಿದ್ದರು.
ಈ ಬಗ್ಗೆ ರೈತರು ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದು, ಏಪ್ರಿಲ್ 11ರಂದು 4 ಸಾವಿರ ರೂ ಹಣ ಪಡೆಯುವ ವೇಳೆ ಭ್ರಷ್ಟಾಚಾರ ನಿಗ್ರಹದಳದವರು ದಾಳಿ ನಡೆಸಿದ್ದರು. ಭ್ರಷ್ಟ ಅರಣ್ಯ ರಕ್ಷಕನ ಬಗ್ಗೆ ಸಾಕ್ಷಿ ಸಂಗ್ರಹಿಸಿದ ಸರ್ಕಾರಿ ವಕೀಲ ಎಲ್ ಎಂ ಪ್ರಭು ಕಠಿಣ ಶಿಕ್ಷೆ ವಿಧಿಸಬೇಕು ಎಂದು ವಾದಿಸಿದರು.
ನ್ಯಾಯಾಲಯದ ಗುರುಶಾಂತ ಸಂಕಣ್ಣನವರ್ `ಮನೆಯಲ್ಲಿ ವಯಸ್ಸಾದ ತಂದೆ-ತಾಯಿ ಇದ್ದಾರೆ. 5 ವರ್ಷದ ಮಗುವಿದ್ದು, ಅವರಿಗೂ ನಾನೇ ಆಧಾರ’ ಎಂದು ಅಳಲು ತೋಡಿಕೊಂಡಿದ್ದರು. ವಿಚಾರಣೆ ನಡೆಸಿದ ಕಾರವಾರದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಡಿ ಎಸ್ ವಿಜಯಕುಮಾರ 2 ವರ್ಷ ಜೈಲು ಹಾಗೂ 10 ಸಾವಿರ ರೂ ದಂಡದ ಆದೇಶ ನೀಡಿದರು. ದಂಡ ಪಾವತಿಸಲು ವಿಫಲವಾದಲ್ಲಿ ಮತ್ತೆ 3 ತಿಂಗಳು ಜೈಲು ಶಿಕ್ಷೆ ವಿಸ್ತರಿಸುವ ಬಗ್ಗೆ ಆದೇಶಿಸಿದರು.