ಶೃದ್ಧಾ ಕೇಸ್ ನಂತೆ ಮತ್ತೊಂದು ಹೇಯ ಕೃತ್ಯ: ಗೆಳತಿಯನ್ನು ಕೊಂದು 4 ದಿನ ಮೆಡಿಕಲ್ ಶಾಪ್ ನಲ್ಲಿಟ್ಟ ಕ್ರೂರಿ ಪ್ರಿಯಕರ
ಛತ್ತೀಸ್ ಗಢ-ದೆಹಲಿಯಲ್ಲಿ ಅಪ್ತಾಬ್ ಎಂಬಾತ ತನ್ನ ಗೆಳತಿ ಶೃದ್ಧಾ ವಾಲ್ಕರ್ ಎಂಬ ಯುವತಿಯನ್ನು ಭೀಕರವಾಗಿ ಕೊಂದು ವಿಕೃತಿ ಮೆರೆದಿದ್ದ ಪ್ರಕರಣ ದೇಶವನ್ನೇ ಬೆಚ್ಚಿಬೀಳಿಸಿದೆ. ಈ ಬೆನ್ನಲ್ಲೇ ಛತ್ತೀಸಗಢದ ಬಿಲಾಸ್ ಪುರದಲ್ಲೂ ಇಂಥದ್ದೇ ಘಟನೆಯೊಂದು ಬೆಳಕಿಗೆ ಬಂದಿದೆ. ಹಣದ ವ್ಯಾಮೋಹದಿಂದ ಪ್ರೀತಿಸಿದವಳನ್ನೇ ಕೊಂದ ಪ್ರೇಮಿಯೊಬ್ಬ ಆಕೆಯ ಮೃತದೇಹವನ್ನು 4 ದಿನಗಳ ಕಾಲ ಮೆಡಿಕಲ್ ಶಾಪ್ ನಲ್ಲಿ ಬಚ್ಚಿಟ್ಟು ದುಷ್ಕøತ್ಯ ಮೆರೆದಿದ್ದಾನೆ.
ಪ್ರಿಯಕರನೇ ತನ್ನ ಪ್ರಿಯತಮೆಯನ್ನು ತನ್ನ ಕೈಯ್ಯಾರೆ ಕೊಂದಿದ್ದಲ್ಲದೇ, ತನ್ನದೇ ಮೆಡಿಕಲ್ ಶಾಪ್ ನಲ್ಲಿ ಆಕೆಯ ಶವವನ್ನು 4 ದಿನಗಳ ಕಾಲ ಬಚ್ಚಿಟ್ಟಿದ್ದಾನೆ. ಛತ್ತೀಸಗಢದ ಬಿಲಾಸ್ ಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಮೆಡಿಕಲ್ ಸ್ಟೋರ್ ಮಾಲೀಕ ತನ್ನ ಪ್ರಿಯತಮೆ ಪ್ರಿಯಾಂಕಳನ್ನು ಕೊಲೆಗೈದ ಪ್ರಕರಣದಲ್ಲಿ ಜೈಲು ಪಾಲಾಗಿದ್ದಾನೆ. ದೆಹಲಿಯ ಶೃದ್ಧಾ ಕೊಲೆ ಕೇಸ್ ಮಾಸುವ ಮುನ್ನವೇ ಮತ್ತೊಂದು ಘಟನೆ ದೇಶವನ್ನೇ ನಡುಗಿಸಿದೆ.
ಮೆಡಿಕಲ್ ಸ್ಟೋರ್ ನಡೆಸುತ್ತಿದ್ದ ಆಶಿಶ್ ಸಾಹು ಮತ್ತು ಪ್ರಿಯಾಂಕ ಹಲವು ವರ್ಷಗಳಿಂದ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಪ್ರಿಯಾಂಕ ಬಿಲಾಸ್ ಪುರದ ಹಾಸ್ಟೆಲ್ ನಲ್ಲಿ ಛತ್ತೀಸ್ ಗಢ್ ರಾಜ್ಯ ನಾಗರಿಕ ಸೇವಾ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಳು. ಹೀಗಿರುವಾಗ ಆಶಿಶ್ ಹಾಗೂ ಪ್ರಿಯಾಂಕ ನಡುವೆ ಸ್ನೇಹ ಬೆಳೆದಿತ್ತು. ಬಳಿಕ ಸ್ನೇಹ ಪ್ರೀತಿಗೆ ತಿರುಗಿ ಪ್ರೇಮಿಗಳಾದರು. ಇಬ್ಬರೂ ಶೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುತ್ತಿದ್ದರು. ಈ ವ್ಯವಹಾರ ನಿಮಿತ್ತ ಆಶಿಶ್ ಸಾಹು ಪ್ರಿಯಾಂಕಾಳಿಂದ ಆಗಾಗ ಹಣದ ಸಹಾಯ ಪಡೆಯುತ್ತಿದ್ದನು. ಆದಾಗ್ಯೂ ಆಶಿಶ್ ಷೇರು ಮಾರುಕಟ್ಟೆ ಹೂಡಿಕೆಯಲ್ಲಿ ಅಪಾರ ಪ್ರಮಾಣ ನಷ್ಟ ಅನುಭವಿಸಿದ್ದನು. ಹೀಗಾಗಿ ಅವರಿಬ್ಬರ ನಡುವೆ ಮನಸ್ತಾಪ ಉಂಟಾಗಿದೆ. ಅಲ್ಲದೇ ಪ್ರಿಯಾಂಕ ತನ್ನಿಂದ ಪಡೆದ 11 ಲಕ್ಷ ರೂ. ಸಾಲ ಹಿಂದಿರುಗಿಸುವಂತೆ ಆಶಿಶ್ ನನ್ನು ಒತ್ತಾಯಿಸಿದ್ದಾಳೆ. ಇದೇ ವಿಚಾರಕ್ಕೆ ದೊಡ್ಡ ಗಲಾಟೆ ನಡೆದು ಅದು ವಿಪರೀತ ಮಟ್ಟಕ್ಕೆ ತಿರುಗಿ ಆತ ಕೋಪದ ಭರದಲ್ಲಿ ಪ್ರಿಯಾಂಕಳನ್ನು ಕೊಂದಿದ್ದಾನೆ ಎಂದು ಬಿಲಾಸ್ ಪುರದ ಹಿರಿಯ ಪೊಲೀಸ್ ಆಧೀಕ್ಷಕ ಪಾರುಲ್ ಮಾಥುರ್ ತಿಳಿಸಿದ್ದಾರೆ.
4 ದಿನಗಳ ಕಾಲ ಆಕೆಯ ಮೃತದೇಹವನ್ನು ಮೆಡಿಕಲ್ ಶಾಪ್ ನಲ್ಲಿಟ್ಟು ಶಾಪ್ ಬಾಗಿಲು ಮುಚ್ಚಿದ್ದಾನೆ. ಇತ್ತ ಮಗಳು ಕಾಣೆಯಾದ ಬಗ್ಗೆ ಪ್ರಿಯಾಂಕ ಹೆತ್ತವರು ಬಿಲಾಸ್ ಪುರದ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತನಿಖೆ ಕೈಗೆತ್ತಿಕೊಂಡ ಪೊಲೀಸರು ಆಶಿಶ್ ಮೇಲೆ ತೀವ್ರ ನಿಗಾ ವಹಿಸಿದ್ದರು. ಇತ್ತ ಶವ ವಿಲೇವಾರಿ ಮಾಡಲು ಸೂಕ್ತ ಸಮಯಕ್ಕಾಗ ಕಾಯುತ್ತಿದ್ದ ಆರೋಪಿ ಆಶಿಶ್ ಆಕೆಯ ಶವವನ್ನು ಬಟ್ಟೆಯೊಂದರಲ್ಲಿ ಸುತ್ತಿ ಮೆಡಿಕಲ್ ಶಾಪ್ ನಿಂದ ಕಾರಿನಲ್ಲಿ ಮನೆಗೆ ತೆಗೆದುಕೊಂಡು ಹೋಗುತ್ತಿದ್ದ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಆತನನ್ನು ಬಂಧಿಸಿದ್ದಾರೆ.