ಸಂಸದ ಅನಂತಕುಮಾರ ಹೆಗಡೆ , ಶಾಸಕ ಸುನೀಲ್ ನಾಯ್ಕ, ದಿನಕರ ಶೆಟ್ಟಿ, ರೂಪಾಲಿ ನಾಯ್ಕ ಅವರಿಗೆ ಕಿಂಚಿತ್ತು ಮಾನ ಮರ್ಯಾದೆ ಇದ್ದರೆ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಲಿ- ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷ ಐವಾನ ಡಿಸೋಜ
ಭಟ್ಕಳ-ಬಿಜೆಪಿ ಸರ್ಕಾರದ ಸುಳ್ಳನ್ನು ಜನರಿಗೆ ತಿಳಿಸುವ ಉದ್ದೇಶದಿಂದ ಕಾಂಗ್ರೇಸ್ ಪಕ್ಷದ ವತಿಯಿಂದ ಕುಮಟಾ ಪಟ್ಟಣದ ಮಣಕಿ ಮೈದಾನದಲ್ಲಿ ನ.24 ರಂದು ಬೆಳಿಗ್ಗೆ 10.30 ಕ್ಕೆ ಬೃಹತ್ ರಾಜ್ಯಮಟ್ಟದ ಸಮಾವೇಶ ಹಮ್ಮಿಕೊಂಡಿದ್ದೇವೆ ಎಂದು ಕೆ.ಪಿ.ಸಿ.ಸಿ ಉಪಾಧ್ಯಕ್ಷ ಹಾಗೂ ಉತ್ತರಕನ್ನಡ ಉಸ್ತುವಾರಿ ಐವನ್ ಡಿಸೋಜಾ ಹೇಳಿದರು.
ಅವರು ಮಂಗಳವಾರ ಭಟ್ಕಳದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹೊನ್ನಾವರದ ಪರೇಶ ಮೇಸ್ತ ಸಾವಿನ ಪ್ರಕರಣವನ್ನು ಬಿಜೆಪಿ ರಾಜಕೀಯ ಅಸ್ತ್ರವನ್ನಾಗಿಸಿಕೊಂಡು ಅಧಿಕಾರ ಅನುಭವಿಸುತ್ತಿದೆ. ಪರೇಶ ಮೇಸ್ತ ಸಾವಿನ ನಂತರ ಜಿಲ್ಲೆಯಾದ್ಯಂತ 67 ವಿವಿಧ ಸೆಕ್ಷನ್‌ಗಳಲ್ಲಿ 2988 ಜನರ ವಿರುದ್ಧ ಪ್ರಕರಣ ದಾಖಲಾಗಿ, 361 ಜನರನ್ನು ಪೊಲೀಸರು ಬಂಧಿಸಿದ್ದರು. 272 ಜನರ ಮೇಲೆ ರೌಡಿ ಶೀಟರ್ ಪ್ರಕರಣ ದಾಖಲಾಗಿ, 1699 ಜನರ ವಿರುದ್ಧ ಪೊಲೀಸರು ನ್ಯಾಯಾಲಯದಲ್ಲಿ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಇದರಿಂದ ಅನೇಕ ಯುವಕರ ಬಡ ಕುಟುಂಬಗಳು ಬೀದಿ ಪಾಲಾಗಿತ್ತು. ಈ ಪ್ರಕರಣವನ್ನು ರಾಜಕೀಯ ದುರುದ್ಧೇಶ ಪಡೆದ ಬಿಜೆಪಿ, ಇದು ಸಹಜ ಸಾವಲ್ಲ. ಅನ್ಯಕೋಮಿನವರು ಹೊಡೆದು ಕೊಲೆ ಮಾಡಿದ್ದಾರೆ ಎಂದು ಬಿಂಬಿಸಿ, ರಾಜ್ಯಾದ್ಯಂತ ಕೋಮು ಸಂಘರ್ಷಕ್ಕೆ ಕಾರಣವಾಗಿತ್ತು. ಸುಳ್ಳಿನ ಕಂತೆ ಸೃಷ್ಟಿಸಿದ್ದರಿಂದ ಕರಾವಳಿ ಭಾಗದಲ್ಲಿ ಬಜೆಪಿ ಶಾಸಕರು ಆಯ್ಕೆಯಾಗಿದ್ದರು. ಪರೇಶ ಮೇಸ್ತ ಸಾವಿನ ಫಲಾನುಭವಿಗಳಾದ ಬಿಜೆಪಿ ಶಾಸಕ ಸುನೀಲ್ ನಾಯ್ಕ , ದಿನಕರ ಶೆಟ್ಟಿ, ರೂಪಾಲಿ ನಾಯ್ಕ , ಸಂಸದ ಅನಂತ್ ಕುಮಾರ್ ಹೆಗಡೆ, ಶೋಭಾ ಕರಂದ್ಲಾಜೆ ಅವರಿಗೆ ಕಿಂಚಿತ್ತು ಮಾನ ಮರ್ಯಾದೆ ಇದ್ರೆ ತಕ್ಷಣ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿ ಚುನಾವಣೆ ಎದುರಿಸಲಿ ಎಂದು ಐವನ್ ಡಿಸೋಜಾ ಸವಾಲು ಹಾಕಿದ್ದಾರೆ.
ಅಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಈ ಪ್ರಕರಣವನ್ನು ಸಿ.ಐ.ಡಿ ತನಿಖೆ ಒಪ್ಪಿಸಿದಾಗ ಬಿಜೆಪಿ ಮುಖಂಡರು ಪ್ರತಿಭಟಿಸಿ, ಸಿ.ಬಿ.ಐ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದರು. ಆ ನಂತರ ಪ್ರಕರಣವನ್ನು ಸಿ.ಬಿ.ಐಗೆ ವಹಿಸಲಾಗಿತ್ತು. ಸುಧೀರ್ಘ 5 ವರ್ಷ ತನಿಖೆ ನಡೆಸಿದ ಸಿ.ಬಿ.ಐ ತನಿಖಾ ಸಂಸ್ಥೆಯು ಪರೇಶ ಮೇಸ್ತನದ್ದು, ಕೊಲೆಯಲ್ಲ, ಸಹಜ ಸಾವು ಎಂದು ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿದೆ. ಇದರಿಂದ ಬಿಜೆಪಿಯ ಮುಖವಾಡ ಕಳಚಿಂತಾಗಿದೆ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ಮುಖವಾಡವನ್ನು ಜನರ ಬಳಿ ತೆರೆದಿಡಲು ಸಮಾನತೆ ಮತ್ತು ಸೌಹಾರ್ದತೆ ಎಂಬ ಧ್ಯೇಯ ವಾಕ್ಯದೊಂದಿಗೆ ಕುಮಟಾದ ಮಣಕಿ ಮೈದಾನದಲ್ಲಿ ಕಾಂಗ್ರೆಸ್ ಪಕ್ಷದಿಂದ ಬೃಹತ್ ರಾಜ್ಯ ಮಟ್ಟದ ಸಮಾವೇಶ ಹಮ್ಮಿಕೊಂಡಿದ್ದೇವೆ. ಪರೇಶ ಮೇಸ್ತನ ಪ್ರಕರಣದ ಲಾಭ ಪಡೆದ ಬಿಜೆಪಿ, ಬೆಲೆ ಏರಿಕೆ, ಬಡವರಿಗೆ ಅನ್ಯಾಯ ಮಾಡುತ್ತಿರುವುದು ಸೇರಿದಂತೆ ವಿವಿಧ ಲೋಪ-ದೋಷಗಳನ್ನು ಜನರ ಮುಂದಿಡಲು ನವಂಬರ್ .24 ರಂದು ಕುಮಟಾದ ಮಣಕಿ ಮೈದಾನದಲ್ಲಿ ಬ್ರಹತ್ ಸಮಾವೇಶ ಬೆಳಿಗ್ಗೆ 10.30 ರಿಂದ ಮಧ್ಯಾಹ್ನದ ವರೆಗೆ ಹಮ್ಮಿಕೂಂಡಿದೆವೆ. ಸಮಾವೇಶದಲ್ಲಿ ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ರಾಜ್ಯ ಉಸ್ತುವಾರಿ ಸುರ್ಜೇವಾಲ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ, ಮಾಜಿ ಮುಖ್ಯಮಂತ್ರಿ ವೀರಪ್ಪ ಮೋಯ್ಲಿ, ಮಾಜಿ ಸಚಿವ ಹಾಗೂ ಹಿರಿಯ ಮುಖಂಡ ಆರ್.ವಿ.ದೇಶಪಾಂಡೆ, ಮಾಜಿ ಸಚಿವರು, ಹಾಲಿ ಶಾಸಕರು, ಮಾಜಿ ಶಾಸಕರು ಸೇರಿದಂತೆ ಸುಮಾರು 67 ರಾಜ್ಯದ ಮುಖಂಡರು ಪಾಲ್ಗೊಳ್ಳಲಿದ್ದಾರೆ.100 ಜನ ಮುಖಂಡರ ವೇಧಿಕೆ ನಿರ್ಮಾಣವಾಗಲಿದೆ ಎಂದರು. ಅಲ್ಲದೇ ರಾಜ್ಯದ ವಿವಿಧ ಜಿಲ್ಲೆ, ತಾಲೂಕುಗಳಿಂದ ಸುಮಾರು 50 ಸಾವಿರ ಕಾರ್ಯಕರ್ತರು ಭಾಗವಹಿಸುತ್ತಾರೆ ಎಂದರು.ಈ ಸಂದರ್ಭದಲ್ಲಿ ಭಟ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ನಾಯ್ಕ, ಮಾಜಿ ಶಾಸಕ ಜೆ.ಡಿ ನಾಯ್ಕ, ಕಾಂಗ್ರೆಸ್ ಪಕ್ಷದ ಎಂ.ಎಲ್.ಎ ಟಿಕೆಟ್ ಆಕಾಂಕ್ಷಿ ಶ್ರೀಧರ್ ನಾಯ್ಕ ಕೈಕಿಣಿ, ಪುರಸಭೆ ಅಧ್ಯಕ್ಷ ಪರ್ವೇಜ್ ಖಾಸಿಮ, ಸದಸ್ಯ ಫಯಾಜ್ ಮುಲ್ಲಾ, ಕಾಂಗ್ರೆಸ್ ಮುಖಂಡರಾದ, ಕೆ.ಜಿ.ನಾಯ್ಕ, ಟಿ.ಡಿ.ನಾಯ್ಕ, ಪುಂಡಲೀಕ ಹೇಬಳೆ, ಮಹೇಶ್ ನಾಯ್ಕ ಕಾರಗದೆ,ನಾಗರಾಜ್ ನಾಯ್ಕ, ಮಹಾಬಲೇಶ್ವರ ನಾಯ್ಕ , ನಾರಾಯಣ ನಾಯ್ಕ, ಸಚಿನ್ ನಾಯ್ಕ, ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವನಾಥ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.