ಸಿದ್ದರಾಮಯ್ಯ-ಡಿಕೆ ಶಿವಕುಮಾರ್ ನಡುವಿನ ಸಿಎಂ ಖುರ್ಚಿ ಜಟಾಪಟಿ: ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿ?
ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗಿ ಬರೋಬ್ಬರಿ ಒಂದು ವರ್ಷ ಪೂರೈಸಿದ್ದು, ಆರಂಭದಿಂದಲೂ ಕೈ ಪಾಳಯದಲ್ಲಿ ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ನಡುವೆ ಸಿಎಂ ಸ್ಥಾನಕ್ಕಾಗಿ ಜಟಾಪಟಿ ಜೋರಾಗಿಯೇ ಇದೆ.
ಸರ್ಕಾರ ರಚನೆಯ ಸಂದರ್ಭದಲ್ಲಿ ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿ ಸ್ಥಾನಕ್ಕೆ ಅವಕಾಶ ಮಾಡಿಕೊಟ್ಟಿತ್ತು.
ಅದಲ್ಲದೇ ಅಧಿಕಾರ ಹಂಚಿಕೆ ಸೂತ್ರದ ಕುರಿತು ಸಹ ಕಾಂಗ್ರೆಸ್ ವರಿಷ್ಠರ ಚರ್ಚೆ ನಡೆಸಿದ್ದರು. ಇದೀಗ ಲೋಕಸಭಾ ಚುನಾವಣೆಯ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ್ ಬಣಗಳ ನಡುವೆ ಸಿಎಂ ಸ್ಥಾನಕ್ಕೆ ಜಟಾಪಟಿ ಮತ್ತೆ ಮುನ್ನಲ್ಲೇ ಬಂದಿದ್ದು, ಸದ್ಯ ಹೈಕಮಾಂಡ್ ಅಂಗಳ ತಲುಪಿದೆ.
ಪದೇ ಪದೇ ನಾಯಕತ್ವಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡುವಿನ ಕಚ್ಚಾಟ ಶಮನ ಮಾಡಲು ಕಾಂಗ್ರೆಸ್ ಹೈಕಮಾಂಡ್ ಮಾಸ್ಟರ್ ಪ್ಲಾನ್ ನಡೆಸಿದ್ದು, ಎಐಸಿಸಿ ಅಧ್ಯಕ್ಷ ಹಾಗೂ ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನೇ ಕರ್ನಾಟಕ ರಾಜಕಾರಣಕ್ಕೆ ಇಳಿಸಲು ಸಿದ್ಧತೆ ನಡೆದಿದೆ ಎಂದು ಹೇಳಲಾಗಿದೆ.
ಮುಖ್ಯಮಂತ್ರಿ ಸ್ಥಾನಕ್ಕಾಗಿ ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಬಣಗಳ ನಡುವೆ ಕಚ್ಚಾಟ ಜೋರಾಗಿದೆ. ಅಲ್ಲದೇ ಒಕ್ಕಲಿಗ ಸ್ವಾಮೀಜಿಗಳು ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದಾರೆ, ಇತ್ತ ಕಾಂಗ್ರೆಸ್ ಶಾಸಕರು ದಿನಕ್ಕೊಂದು ಹೇಳಿಕೆ ನೀಡುತ್ತಿದ್ದು, ಕಾಂಗ್ರೆಸ್ ಅನ್ನು ಆಪರೇಷನ್ ಕಮಲದಿಂದ ಪಾರು ಮಾಡುವುದು ಹಾಗೂ ಕೆಪಿಸಿಸಿಯಲ್ಲಿನ ಆಂತರಿಕ ಕಚ್ಚಾಟಕ್ಕೆ ತೆರೆ ಎಳೆಯಲು ಕಾಂಗ್ರೆಸ್ ಹೈಕಮಾಂಡ್ ಮಾಸ್ಟರ್ ಪ್ಲಾನ್ ನಡೆಸಿದ್ದು, ಸಿದ್ದರಾಮಯ್ಯ ನಂತರದ ಅವಧಿಗೆ ಮಲ್ಲಿಕಾರ್ಜುನ್ ಖರ್ಗೆ ಅವರನ್ನ ಮುಖ್ಯಮಂತ್ರಿಯನ್ನಾಗಿ ಮಾಡಲು ವರಿಷ್ಠರು ಮುಂದಾಗಿದ್ದಾರೆ.
ಎರಡು ಬಾರಿ ಮುಖ್ಯಮಂತ್ರಿ ಆಗುವುದರ ಜೊತೆಗೆ ವಿಧಾನಸಭೆಯ ಪ್ರತಿಪಕ್ಷದ ನಾಯಕನಾಗಿ ಸಿದ್ದರಾಮಯ್ಯ ಅವರು ಕೆಲಸ ಮಾಡಿದ್ದಾರೆ. ಇನ್ನೂ ಕಾಂಗ್ರೆಸ್ ನಲ್ಲಿ ದಲಿತ ನಾಯಕರು ಉನ್ನತ ಹುದ್ದೆ ಸಿಗುವುದಿಲ್ಲ ಎಂದು ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಪದೇ ಪದೇ ವಾಗ್ದಾಳಿ ನಡೆಸುತ್ತಿರುತ್ತಾರೆ. ಅಲ್ಲದೇ ಡಿ ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಬಣದ ನಾಯಕ ಕಿತ್ತಾಟದಿಂದ ತೀವ್ರ ಮುಜುಗರಕ್ಕೊಳಗಾಗಿದ್ದು, ಸರ್ಕಾರವನ್ನ ಮುನ್ನಡೆಸಿಕೊಂಡು ಹೋಗುವ ನಿಟ್ಟಿನಲ್ಲಿ ಮಲ್ಲಿಕಾರ್ಜುನ್ ಖರ್ಗೆ ಅವರಿಗೆ ಮುಖ್ಯಮಂತ್ರಿ ಸ್ಥಾನ ಒಲಿದು ಬರುವ ಸಾಧ್ಯತೆ ಇದೆ.
ಅಧಿಕಾರದಿಂದ ಕೆಳಗಿಳಿಯುವ ಸಿದ್ದರಾಮಯ್ಯ ಅವರಿಗೆ ಕೆಪಿಸಿಸಿ ಅಧ್ಯಕ್ಷ ಹುದ್ದೆ ಇಲ್ಲವೇ ರಾಷ್ಟ್ರ ರಾಜಕಾರಣಕ್ಕೆ ನಿಯೋಜಿಸಲಿದ್ದಾರೆ ಎಂಬ ಮಾತು ಕಾಂಗ್ರೆಸ್ ವಲಯದಲ್ಲಿ ದಟ್ಟವಾಗಿ ಕೇಳಿ ಬರುತ್ತಿದೆ. ಇನ್ನೂ ಡಿ ಕೆ ಶಿವಕುಮಾರ್ ಉಪ ಮುಖ್ಯಮಂತ್ರಿಯಾಗೇ ಮುಂದುವರೆಯುತ್ತಾರೆ. ಅಲ್ಲದೇ ಕ್ಯಾಬಿನೆಟ್ ನಲ್ಲಿ ಕೆಲ ಬದಲಾವಣೆಗಳಾಗುವ ಸಾದ್ಯತೆ ಇದೆ. ಕೆಲ ಹಿರಿಯ ನಾಯಕರಿಗೆ ಕಳೆದ ಬಾರಿ ಸಚಿವ ಸ್ಥಾನ ಕೈ ತಪ್ಪಿದ ಹಿನ್ನೆಲೆ ತೀವ್ರ ಅಸಮಾಧಾನ ಹೊರ ಹಾಕಿದ್ರು. ಹೀಗಾಗಿ ಮಲ್ಲಿಕಾರ್ಜುನ್ ಖರ್ಗೆ ಸಿಎಂ ಆದ್ರೆ, ಸಚಿವ ಸಂಪುಟದಲ್ಲಿ ಬದಲಾವಣೆಯಾಗಲಿದೆ ಎಂದು ಹೇಳಲಾಗಿದೆ.
ಇನ್ನೂ ಕಾಂಗ್ರೆಸ್ ಮೂಲ ಮಂತ್ರದಂತೆ ಒಬ್ಬ ವ್ಯಕ್ತಿ ಒಂದು ಹುದ್ದೆ. ಹೀಗಾಗಿ ಕಾಂಗ್ರೆಸ್ ಹೈಕಮಾಂಡ್ ಚಿಂತನೆಯಂತೆ ಮಲ್ಲಿಕಾರ್ಜುನ್ ಖರ್ಗೆ ಅವರು ಎಐಸಿಸಿ ಅಧ್ಯಕ್ಷ ಸ್ಥಾನ ಇಲ್ಲವೆ ರಾಜ್ಯಸಭೆಯ ಪ್ರತಿಪಕ್ಷ ಸ್ಥಾನದಿಂದ ಕೆಳಗಿಳಿಯಬೇಕಾಗುತ್ತದೆ. ಇಂದಿರಾ ಗಾಂಧಿ ಕುಟುಂಬಕ್ಕೆ ಅತ್ಯಂತ ನಿಷ್ಠರಾಗಿರುವ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಒಂದು ಬಾರಿಯಾದರೂ ಮುಖ್ಯಮಂತ್ರಿ ಮಾಡಬೇಕೆಂದು ಪಕ್ಷದ ಅಧಿನಾಯಕರಾಗಿರುವ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಆಸಕ್ತಿ ಹೊಂದಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್ ತೆಗೆದುಕೊಂಡ ನಿರ್ಧಾರವನ್ನು ಸಿದ್ದರಾಮಯ್ಯ ಮತ್ತು ಶಿವಕುಮಾರ್ ಅವರಿಗೆ ಇತ್ತೀಚೆಗೆ ದೆಹಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರ ಗಮನಕ್ಕೆ ತಂದಿದ್ದಾರೆ ಮತ್ತು ಮಲ್ಲಿಕಾರ್ಜುನ್ ಖರ್ಗೆ ಅವರಿಗೆ ಒಮ್ಮೆ ಅವಕಾಶ ಮಾಡಿಕೊಡಿ ಎಂದು ಸಲಹೆ ನೀಡಿದ್ದಾರೆ. ಈ ಬೆಳವಣಿಗೆ ನಂತರ ಶಿವಕುಮಾರ್ ದೆಹಲಿಯಿಂದ ನಗರಕ್ಕೆ ಹಿಂತಿರುಗಿದವರು ಮತ್ತೆ ದೆಹಲಿಗೆ ತೆರಳಿ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಭೇಟಿ ಮಾಡಿದ್ದು, ರಾಹುಲ್ ಪ್ರಸ್ತಾಪಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಸುದೀರ್ಘ ಚರ್ಚೆ ಮಾಡಿದ್ದಾರೆ ಎನ್ನಲಾಗಿದೆ.