ಬಾಗಲಕೋಟೆ : ಕಬ್ಬಿನ ಬೆಳೆಗೆ ನ್ಯಾಯಯುತ ಬೆಲೆ ನೀಡಬೇಕು ಎಂದು ಒತ್ತಾಯಿಸಿ 53 ದಿನಗಳಿಂದ ಕಬ್ಬು ಬೆಳೆಗಾರರು ನಡೆಸುತ್ತಿದ್ದ ಪ್ರತಿಭಟನೆ ಅಂತ್ಯವಾಗಿದೆ.
ಮುಧೋಳ ನಗರದ ಸಂಗೊಳ್ಳಿ ರಾಯಣ್ಣ ಸರ್ಕಲ್ನಲ್ಲಿ ರೈತರು ಹೋರಾಟ ನಿರತರಾಗಿದ್ದರು. ರೈತರ ಪ್ರತಿಭಟನೆಯನ್ನು ಕಡೆಗೂ ಗಣನೆಗೆ ತೆಗೆದುಕೊಂಡ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಸದ್ಯ ಸರ್ಕಾರ, ರೈತರ ಬೇಡಿಕೆಯಂತೆ ಕಬ್ಬಿಗೆ ಬೆಲೆ ಕೊಡಿಸುವ ಭರವಸೆ ನೀಡಿದೆ. ಹೀಗಾಗಿ ರೈತರು ತಮ್ಮ ಹೋರಾಟವನ್ನು ಹಿಂಪಡೆದಿದ್ದಾರೆ.
ಪ್ರತಿ ಟನ್ಗೆ ರೈತರ ಬೇಡಿಕೆಯಂತೆ 2850 ರೂ. ಕೊಡಿಸಲು ಸಿಎಂ ಬೊಮ್ಮಾಯಿ ಭರವಸೆ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ರೈತರು ತಮ್ಮ ಹೋರಾಟ ಕೈಬಿಟ್ಟಿದ್ದಾರೆ.
ಫೋನ್ ಮೂಲಕ ಬಾಗಲಕೋಟೆ ಡಿಸಿಗೆ ಬೊಮ್ಮಾಯಿ ಸಂದೇಶ ರವಾನಿಸಿದ್ದಾರೆ . ಮುಖ್ಯಮಂತ್ರಿ ಡಿಸಿಗೆ ನೀಡಿದ್ದ ಭರವಸೆ ಬಗ್ಗೆ ಹೋರಾಟದ ಸ್ಥಳಕ್ಕೆ ಬಂದು ಬಾಗಲಕೋಟೆಯ ಎ.ಡಿ.ಸಿ ಮಹದೇವ ಮುರಗಿ, ಜಮಖಂಡಿಯ ಎ.ಸಿ ಸಿದ್ದು ಹುಲ್ಲಳ್ಳಿ ಮತ್ತು ಎಸ್ಪಿ ಜಯಪ್ರಕಾಶ್ ಮಾಹಿತಿ ನೀಡಿದ್ದಾರೆ.
ನಿಗದಿ ಮಾಡುವುದಾಗಿ ಭರವಸೆ ನೀಡಿದ ಬಳಿಕ ರೈತರು ಪ್ರತಿಭಟನೆ ಅಂತ್ಯಗೊಳಿಸಿದ್ದಾರೆ. ಹಾಗೂ ಸಿಎಂ ಬೊಮ್ಮಾಯಿ 7 ದಿನಗಳಲ್ಲಿ ಮತ್ತೆ ರೈತರ ಜೊತೆ ಸಭೆ ನಡೆಸುವುದಾಗಿ ಹೇಳಿದ್ದಾರೆ.
ನ್ಯಾಯಯುತ ಬೆಲೆ ನಿಗದಿ ಮಾಡುವುದಾಗಿ ಹೇಳಿದ ಬೆನ್ನಲ್ಲೇ ಕಬ್ಬು ಬೆಳೆಗಾರರು ನಡೆಸುತ್ತಿದ್ದ ಪ್ರತಿಭಟನೆ ಯನ್ನು ಕೈ ಬಿಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಬೆಲೆ ನಿಗದಿ ಮಾಡದೇ ಇದ್ದಲ್ಲಿ ಮತ್ತೆ ಪ್ರತಿಭಟನೆ ನಡೆಸುತ್ತೇವೆ ಎಂದು ರೈತರು ಎಚ್ಚರಿಕೆ ನೀಡಿದ್ದಾರೆ. ಕಬ್ಬಿನ ಬೆಳೆಗೆ ನ್ಯಾಯಯುತ ಬೆಲೆ ನೀಡಬೇಕು ಎಂದು ಒತ್ತಾಯಿಸಿ ಕಳೆದ 53 ದಿನಗಳಿಂದ ರಾಜ್ಯದ ಹಲವು ಕಡೆ ಕಬ್ಬು ಬೆಳೆಗಾರರು ಪ್ರತಿಭಟನೆ ನಡೆಸುತ್ತಿದ್ದರು . ಬಾಗಲಕೋಟೆ ಮತ್ತು ವಿಜಯಪುರದಲ್ಲಿ ಹೆದ್ದಾರಿ ಬಂದ್ ಮಾಡಿ ಬೆಳೆಗಾರರು ಪ್ರತಿಭಟನೆ ನಡೆಸಿದ್ದರು.
ವರದಿ:ಶರಣಪ್ಪ ಹೆಳವರ,ಬಾಗಲಕೋಟೆ