ಗುರುಪರಂಪರೆ ಶಕ್ತಿಗೆ ಪ್ರಾಚೀನ ಕಾಲದಿಂದಲೂ ಶ್ರೇಷ್ಠ ಗೌರವವಿದೆ
ನಾಗಮಂಗಲ: ಜಗತ್ತಿನಲ್ಲಿ ಯಾವುದೇ ಪರಂಪರೆಗಳು ಮುಂದುವರಿಯುತ್ತಿದ್ದರೂ ಸಹ ಪ್ರಾಚೀನ ಕಾಲದಿಂದಲೂ ನಡೆದು ಬರುತ್ತಿರುವ ಶ್ರೇಷ್ಠ ಗುರುಶಿಷ್ಯ ಪರಂಪರೆಗೆ ಯಾವುದೂ ಸಾಟಿಯಾಗಲಾರದು ಎಂದು ಹೆರಗನಹಳ್ಳಿ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ರಿಯಾಜ್ ಅಹಮದ್ ಹೇಳಿದರು.
ತಾಲ್ಲೂಕಿನ ಹೆರಗನಹಳ್ಳಿ ಪ್ರೌಢಶಾಲೆಯಲ್ಲಿ 96 ನೇ ಸಾಲಿನ ವಿದ್ಯಾರ್ಥಿಗಳಿಂದ ಆಯೋಜಿಸಲಾಗಿದ್ದ ಸ್ನೇಹಸಂಗಮ ಮತ್ತು ಗುರುವಂದನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಈ ಶಾಲೆಗೆ ನಾವು ಬಂದಾಗ ಬೆಂಗಾಡಾಗಿದ್ದು, ನಂತರ ಶಾಲೆಯನ್ನು ವಿದ್ಯಾರ್ಥಿಗಳ ಸಹಾಯದಿಂದ ಬದಲಾವಣೆ ತರುವ ಮೂಲಕ ಮಾದರಿ ಶಾಲೆಯಾಗಿ ಬದಲಾಯಿಸಿದ್ದು, ಒಂದು ಇತಿಹಾಸವಾಗಿದೆ. ಜೊತೆಗೆ ಮಕ್ಕಳಲ್ಲಿ ಶಿಸ್ತನ್ನು ಮೂಡಿಸುವ ನಿಟ್ಟಿನಲ್ಲಿ ಶಿಕ್ಷಕರು ಸಹ ಸಮವಸ್ತ್ರವನ್ನು ಅಳವಡಿಸಿಕೊಂಡಿದ್ದು ಶಾಲೆಯ ಶಿಕ್ಷಕರ ಹೆಗ್ಗಳಿಕೆಯಾಗಿದೆ.
ಅಂತಹ ಶಾಲೆಯಲ್ಲಿ ವ್ಯಾಸಂಗ ಮಾಡಿರುವ ನೀವು ಶಾಲೆಯನ್ನು, ಶಿಕ್ಷಕರನ್ನು ಮರೆಯದೇ ಸ್ಮರಿಸಿಕೊಳ್ಳುವ ಕೆಲಸ ಮಾಡುತ್ತಿರುವುದಕ್ಕೆ ನಾವೆಲ್ಲರೂ ಚಿರರುಣಿಯಾಗಿದ್ದೇವೆ. ನಾವು ಓದಿದ ಶಾಲೆ ಮತ್ತು ಶಿಕ್ಷಕರನ್ನು ಮರೆಯದಿರುವುದೇ ನಾವು ಸಮಾಜಕ್ಕೆ ತೋರುವ ಕೃತಜ್ಞತೆಯಾಗಿದೆ ಎಂದರು.
ಹಿರಿಯ ವಿದ್ಯಾರ್ಥಿ ಚಾಕೇನಹಳ್ಳಿ ನಟರಾಜ್ ನಮ್ಮ ಗುರುಗಳನ್ನು ಮತ್ತು ಸಹಪಾಠಿಗಳನ್ನು ಒಂದೆಡೆ ನೋಡುತ್ತಿರುವುದು ಸಂಭ್ರಮವೇ ಸರಿ. ಇಂದು ಅವರನ್ನು ನೋಡಿದಾಗ ನಮ್ಮ ವಿದ್ಯಾರ್ಥಿ ಜೀವನದ ದಿನಗಳು ಮತ್ತು ಕ್ಷಣಗಳು ಕಣ್ಣ ಮುಂದೆ ಬಂದವು. ನಮಗೆ ಕಲಿಸಿದ ಗುರುಗಳನ್ನು ಗೌರವಿಸುತ್ತಿರುವುದು ಒಂದು ಗೌರವಪೂರ್ಣ ಕ್ಷಣವಾಗಿದೆ ಎಂದರು.
ಅಲ್ಲದೇ ಕಾರ್ಯಕ್ರಮದಲ್ಲಿ 96 ನೇ ಸಾಲಿನಲ್ಲಿ ಕಲಿತ ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನದಲ್ಲಿ ನಡೆದ ಘಟನೆಗಳು ಮತ್ತು ದಿನಗಳು ಸೇರಿದಂತೆ ಶಾಲಾ ದಿನಗಳ ಕುರಿತು ಅನಿಸಿಕೆಗಳನ್ನು ಮೆಲುಕು ಹಾಕಿದರು. ಅಲ್ಲದೇ ಶಾಲೆಯಲ್ಲಿ ಆಗ ಶಿಕ್ಷಕರಾಗಿದ್ದ ಮಹದೇವಪ್ಪ, ಅನಂತ್, ಜಗನ್ನಾಥ್, ಕೇಶವ್, ಮೃತ್ಯುಂಜಯ, ರಾಜೇಗೌಡ, ಮಂಜುನಾಥ್, ಹೊನ್ನಗಿರಿಗೌಡ, ಕೃಷ್ಣಮೂರ್ತಿ, ಗಿರೀಶ್, ಕುಮಾರ್ ಅವರಿಗೆ ಗುರುವಂದನೆ ಸಲ್ಲಿಸಿದರು.
ಹಿರಿಯ ವಿದ್ಯಾರ್ಥಿಗಳು ತಮಗೆ ಬೋಧನೆ ಮಾಡಿದ ಶಿಕ್ಷಕರು ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಂತೆ ಶಾಲೆಗೆ ಗೇಟ್ ಬಳಿಗೆ ತೆರಳಿ ತಮಟೆ ಡೋಲು ಸೇರಿದಂತೆ ಗುರುಗಳಿಗೆ ಪುಷ್ಪಾರ್ಚನೆ ಮಾಡುವ ಜೊತೆಗೆ ಕುಣಿತದೊಂದಿಗೆ ವೇದಿಕೆಗೆ ಕರೆತಂದರು. ಅಲ್ಲದೇ ಗುರುವಂದನ ಮತ್ತು ಸ್ನೇಹ ಸಂಗಮದ ಕಾರ್ಯಕ್ರಮದ ಸ್ಮರಣಾರ್ಥವಾಗಿ ಗುರುಗಳಿಂದ ಮಾವಿನ ಸಸಿಯನ್ನು ನೆಡಲಾಯಿತು. ಜೊತೆಗೆ ಕಾರ್ಯಕ್ರಮಕ್ಕೆ 96 ನೇ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳು ಹೊರರಾಜ್ಯ ಸೇರಿದಂತೆ ವಿದೇಶಗಳಿಂದ ಆಗಮಿಸಿದ್ದು, ಗುರುಗಳ ಪಾದ ಮುಟ್ಟು ಆಶೀರ್ವಾದ ಪಡೆಯುತ್ತಿದ್ದ ಸನ್ನಿವೇಶ ವಿಶೇಷವಾಗಿತ್ತು.
ಹಲವು ವರ್ಷಗಳ ನಂತರ ಗುರುಗಳನ್ನು ಮತ್ತು ಸಹಪಾಠಗಳನ್ನು ಭೇಟಿಯಾದ ಸಂತಸದಲ್ಲಿ ಸೆಲ್ಫಿ ಕ್ಲಿಕಿಸಿಕೊಂಡು ಹರ್ಷ ವ್ಯಕ್ತಪಡಿಸಿದರು.ಅಲ್ಲದೇ ಶಾಲೆ ಮಕ್ಕಳಿಗೆ ಶಬ್ದಕೋಶವನ್ನು ವಿತರಿಸಲಾಯಿತು.
ದಿಲೀಪ್, ಮಂಜುನಾಥ್, ತಿಗಳನಹಳ್ಳಿ ಚಂದ್ರ, ಶಶಿ, ರವಿ ಕೃಷ್ಣೇಗೌಡ, ಬೇಬಿ, ಸವಿತಾ, ಲತಾ, ನಾಗರತ್ನ, ರಮೇಶ್, ಉಮೇಶ್, ಅಪ್ಪಾಜಿಗೌಡ, ಶಿವಕುಮಾರ್, ರವಿಕುಮಾರ್, ರಾಧಾಮಣಿ, ಚಂದ್ರಶೇಖರ್, ಗಿರಿಜೇಶ್, ಶ್ರೀನಿವಾಸ್, ವಾಸುದೇವ,ಮಹಾಲಕ್ಷ್ಮೀ, ಗಿರಿಜಾಮಣಿ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.