ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣ – ಕಾಲೇಜು ವಿದ್ಯಾರ್ಥಿ ವಶಕ್ಕೆ ಪಡೆದ ಎನ್ಐಎ ಅಧಿಕಾರಿಗಳು
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ನಾಗುರಿಯಲ್ಲಿ ಸಂಭವಿಸಿದ ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಎನ್ ಐ ಎ ತಂಡ ನಗರದ ಹೊರವಲಯದ ಶಿಕ್ಷಣ ಸಂಸ್ಥೆಯೊಂದಕ್ಕೆ ದಾಳಿ ನಡೆಸಿದೆ ಎಂದು ಮಾಹಿತಿ ತಿಳಿದು ಬಂದಿದೆ.
ಕಾಲೇಜಿಗೆ ಎನ್ ಐಎ ಅಧಿಕಾರಿಗಳು ದಾಳಿ ನಡೆಸಿ ವಿಧ್ಯಾರ್ಥಿಯನ್ನು ಬಂಧಿಸಿ ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದಾರೆ. ಮೆಕ್ಯಾನಿಕಲ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿ ಉಡುಪಿ ಮೂಲದ ರಿಹಾನ್ ಶೇಖ್ ಎಂಬಾತ ಇದೀಗ ಎನ್ಐಎ ಅಧಿಕಾರಿಗಳ ವಶದಲ್ಲಿದ್ದಾನೆ.
ಈತ ಶಿವಮೊಗ್ಗದ ಪುರಲೆ ಸಮೀಪದ ತುಂಗಾ ನದಿ ತೀರದಲ್ಲಿ ಪ್ರಾಯೋಗಿಕವಾಗಿ ಸ್ಪೋಟಕವನ್ನು ಸ್ಪೋಟಿಸುತ್ತಿದ್ದ ಪ್ರಕರಣದಲ್ಲಿ ಐಸಿಸ್ ಉಗ್ರ ಸಂಘಟನೆ ಜತೆಗೆ ಸಂಪರ್ಕ ಹೊಂದಿದ್ದರೆನ್ನಲಾದ ಬಂಧಿತ ಶಂಕಿತ ಉಗ್ರರಾದ ಮಾಝ್ ಮುನೀರ್ ಎಂಬಾತನ ಜೊತೆಗೆ ನಿರಂತರ ಸಂಪರ್ಕ ಹಾಗೂ ವಿವಿಧ ಚಟುವಟಿಕೆಗಳಲ್ಲಿ ಜತೆಯಾಗಿ ಭಾಗಿಯಾಗಿದ್ದರೆಂಬ ವಿಚಾರದಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ.
ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣದ ಪ್ರಮುಖ ಶಾರೀಖ್ ವಿಚಾರಣೆ ನಡೆಸಿದ ಎನ್ ಐ ಎ ಅಧಿಕಾರಿಗಳು ಶಿಕ್ಷಣ ಸಂಸ್ಥೆಗೆ ದಾಳಿ ನಡೆಸಿದ್ದಾರೆ. ಈಗಾಗಲೇ ಎನ್ ಐಎ ದಿಂದ ಬಂಧಿತನಾಗಿರುವ ಶಂಕಿತ ಉಗ್ರ ಮಾಝ್ ಮುನೀರ್ ಎಂಬಾತ ಇದೇ ಶಿಕ್ಷಣ ಸಂಸ್ಥೆಯಿಂದ ಇಂಜಿನಿಯರಿಂಗ್ ಪದವಿಯನ್ನು ಪಡೆದಿದ್ದನು.
ಬೆಂಗಳೂರಿನಿಂದ ಬಂದಿರುವ ಎನ್ಐಎ ಅಧಿಕಾರಿಗಳ ಏಳು ಮಂದಿಯ ತಂಡದವರು ತನಿಖೆ ನಡೆಸುತ್ತಿದ್ದಾರೆ.