ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಮೂವರು ಸಹೋದರಿಯರು ಸಾಮೂಹಿಕ ಆತ್ಮಹತ್ಯೆ
ತುಮಕೂರು- ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಬರಕನಹಾಲ್ ತಾಂಡಾದಲ್ಲಿ ಮೂವರು ಸಹೋದರಿಯರು ಸಾಮೂಹಿಕವಾಗಿ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ನಡೆದಿದೆ.
ರಂಜಿತಾ, ಬಿಂದು, ಚಂದನಾ ಆತ್ಮಹತ್ಯೆ ಮಾಡಿಕೊಂಡ ಸೋದರಿಯರು ಎಂದು ಗುರುತಿಸಲಾಗಿದೆ.
ಕಳೆದ 9 ದಿನಗಳ ಹಿಂದೆಯೇ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಕೊಳೆತ ವಾಸನೆ ಬಂದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ ಎನ್ನಲಾಗಿದೆ.
ಹಲವು ವರ್ಷಗಳ ಹಿಂದೆಯೇ ತಂದೆ-ತಾಯಿ ಮೃತಪಟ್ಟಿದ್ದರು. ತಂದೆ-ತಂದೆಯನ್ನು ಕಳೆದುಕೊಂಡ ಅನಾಥರಾಗಿದ್ದ ಸಹೋದರಿಯರು ಅಜ್ಜಿ ಜೊತೆಯಲ್ಲಿ ವಾಸವಿದ್ದರು. ಆದ್ರೆ, ಆಸರೆಯಾಗಿದ್ದ ಅಜ್ಜಿಯೂ ಸಹ ಇತ್ತೀಚೆಗೆ ಮರಣ ಹೊಂದಿದ್ದರು. ಬಳಿಕ ಸಹೋದರಿಯರು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ.
ಈ ಸಹೋದರಿಯರ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಈ ಬಗ್ಗೆ ಹುಳಿಯಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.