ಹಾಸನ-ಪ್ರೀತಿಸಿದ ಯುವತಿ ಮೋಸ ಮಾಡಿದಳು ಎಂದು ಹಾಸನದ ಯುವಕನೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚೆನ್ನೈನಲ್ಲಿ ನಡೆದಿದೆ.
ಹಾಸನದ ಸಂಗಮೇಶ್ವರ ಬಡಾವಣೆಯ ಯುವಕ ಕಾರ್ತಿಕ್ (26) ಮೃತ ಯುವಕ. ಹಾಸನದ ಹೋಟೆಲ್ ನಲ್ಲಿ ರಿಸೆಪ್ಷನಿಷ್ಟ್ ಆಗಿ ಕೆಲಸ ಮಾಡುತ್ತಿದ್ದ ಕಾರ್ತಿಕ್ ನನ್ನು ಹೊಳೆ ನರಸೀಪುರ ತಾಲೂಕಿನ ಮಳಲಿ ಗ್ರಾಮದ ಯುವತಿ ಪ್ರೇಮದ ಬಲೆಗೆ ಬೀಳಿಸಿದ್ದಳು. ಕಳೆದ 4 ವರ್ಷಗಳಿಂದ ಇಬ್ಬರೂ ಪರಸ್ಪರ ಪ್ರೀತಿಸಲು ಶುರು ಮಾಡಿದ್ದರು.
ಈ ನಡುವೆ ಯುವತಿ ಅವನಿಂದ ಸಾಕಷ್ಟು ಹಣ ಪೀಕಿದ್ದಳು. ಇದೀಗ 4 ವರ್ಷದ ಪ್ರೀತಿ ನಿರಾಕರಿಸಿ, ಮೋಸ ಮಾಡಿದ ಹಿನ್ನೆಲೆಯಲ್ಲಿ ಕಾರ್ತಿಕ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುದು ಯುವಕನ ಕುಟುಂಬಸ್ಥರು ಹಾಗೂ ಸಂಬಂಧಿಕರ ಆರೋಪವಾಗಿದೆ.
ಜ.26 ರಂದು ತಾನು ಚೆನ್ನೈನಲ್ಲಿದ್ದು ನೀನೂ ಅಲ್ಲಿಗೆ ಬಾ ಎಂದು ಯುವತಿ ಕರೆದಿದ್ದಾಳೆ ಎನ್ನಲಾಗಿದೆ. ಆಕೆಯ ಮಾತು ನಂಬಿ ಕಾರ್ತಿಕ್ ತಕ್ಷಣ ಚೆನ್ನೈಗೆ ಹೋಗಿದ್ದಾನೆ. ಅಲ್ಲಿಗೆ ಹೋಗಿ ಕರೆ ಮಾಡಿದ ನಂತರ ತಾನು ಹಾಸನದಲ್ಲೇ ಇರುವುದಾಗಿ ಹೇಳಿ ಯುವತಿ ಯಾಮಾರಿಸಿದ್ದಾಳೆ. ಈ ವರ್ತನೆಯಿಂದ ಮನನೊಂದ ಕಾರ್ತಿಕ್, ಆಕೆ ನನಗೆ ಮೋಸ ಮಾಡುತ್ತಿದ್ದಾಳೆ ಎಂದು ತಿಳಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.