ಗೆಳೆಯರೊಂದಿಗೆ ಈಜಲು ತೆರಳಿದ್ದ ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ಸಾವು
ಕಲಬುರಗಿ-ಕಲ್ಲಿನ ಖಣಿಯಲ್ಲಿ ತುಂಬಿದ್ದ ನೀರಿನಲ್ಲಿ ಮುಳುಗಿ ವಿದ್ಯಾರ್ಥಿ ಮೃತಪಟ್ಟ ಘಟನೆ ನಗರದ ಶ್ರೀ ರಾಮತೀರ್ಥ ದೇವಸ್ಥಾನದ ಹಿಂಭಾಗದಲ್ಲಿ ನಡೆದಿದೆ.
ಬೀದರ್ ಮೂಲದ ಆಶೀಶ್ ಗುಪ್ತಾ (15) ಮೃತ ವಿದ್ಯಾರ್ಥಿ ಎಂದು ತಿಳಿದು ಬಂದಿದೆ. 9 ನೇ ತರಗತಿ ಓದುತ್ತಿದ್ದ ಆಶೀಶ್ ಬೀದರ್ ನಿಂದ ತನ್ನ ಸ್ನೇಹಿತರೊಂದಿಗೆ ಕಲಬುರಗಿ ಪ್ರವಾಸಕ್ಕೆ ತೆರಳಿದ್ದ ಸಂದರ್ಭ ಈ ಘಟನೆ ನಡೆದಿದೆ.
ಕಲಬುರಗಿಯ ಶ್ರೀ ರಾಮತೀರ್ಥ ದೇವಸ್ಥಾನದಲ್ಲಿ ದರ್ಶನ ಪಡೆದು ಸ್ನೇಹಿತರೊಡನೆ ಕಲ್ಲಿನ ಖಣಿಯಲ್ಲಿ ನಿಂತಿದ್ದ ನೀರಿನಲ್ಲಿ ಈಜಾಡುವಾಗ ಈ ಘಟನೆ ಸಂಭವಿಸಿದ್ದು, ನೀರಿನಲ್ಲಿ ಮುಳುಗಿ ಆಶೀಶ್ ಸಾವನಪ್ಪಿದ್ದಾನೆ.
ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಬಂದು ಮೃತದೇಹ ಹೊರತೆಗೆದಿದ್ದಾರೆ. ಕಲಬುರಗಿ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.