ಸ. ೧೨ ಕ್ಕೆ ಅರಣ್ಯ ಭೂಮಿ ಹಕ್ಕು ಹೋರಾಟ ೩೩ ವರ್ಷ ;
ಮರಿಚಿಕೆಯಾದ ಭೂಮಿ ಹಕ್ಕು.
ಶಿರಸಿ: ಜಿಲ್ಲೆಯ ಜ್ವಲಂತ ಸಮಸ್ಯೆಗಳಲ್ಲಿ ಒಂದಾದ ಅರಣ್ಯ ಭೂಮಿ ಹಕ್ಕಿಗಾಗಿ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಹೋರಾಟವು ಸ ೧೨ ಕ್ಕೆ ೩೩ ನೇ ವರ್ಷ ಪಾದಾರ್ಪಣೆ ಮಾಡುತ್ತಿದ್ದು, ಭೂಮಿ ಹಕ್ಕಿಗಾಗಿ ಕಾನೂನು ಜ್ಯಾರಿಯಲ್ಲಿದ್ದರೂ ಭೂಮಿ ಹಕ್ಕು ಮರಿಚಿಕೆಯಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಭೌಗೋಳಿಕವಾಗಿ ಶೇ. ೮೦ ರಷ್ಟು ಅರಣ್ಯದಿಂದ ಆವೃತ್ತವಾಗಿರುವುದರಿಂದ, ವಾಸ್ತವ್ಯ ಮತ್ತು ಸಾಗುವಳಿಗಾಗಿ ಅರಣ್ಯವಾಸಿಗಳು ಅರಣ್ಯ ಭೂಮಿಯ ಮೇಲೆ ಅವಲಂಭಿತವಾಗಿರುವುದು ಜಿಲ್ಲೆಯಲ್ಲಿ ಅನಿವಾರ್ಯ. ಜಿಲ್ಲೆಯ ಒಟ್ಟು ಜನಸಂಖ್ಯೆ ಹತ್ತು ಲಕ್ಷವಾಗಿದ್ದು. ಅವುಗಳಲ್ಲಿ ಸುಮಾರು ಮೂರುವರೆಯಿಂದ ನಾಲ್ಕುವರೆ ಲಕ್ಷ ಜನಸಂಖ್ಯೆಯ ಸುಮಾರು ೮೫ ಸಾವಿರ ಕುಟುಂಬಗಳು ಅರಣ್ಯ ಭೂಮಿಯ ಮೇಲೆ ಅವಲಂಭಿತರಾಗಿರುತ್ತಾರೆ.
ಚುನಾವಣೆ ಬಂದಾಗ ಮಾತ್ರ ಅರಣ್ಯವಾಸಿಗಳ ಸಮಸ್ಯೆ ಬಗ್ಗೆ ಆಶ್ವಾಸನೆ ನೀಡುವ ರಾಜಕೀಯ ಪಕ್ಷಗಳು, ಚುನಾವಣೆ ಫಲಿತಾಂಶದ ನಂತರದ ದಿನಗಳಲ್ಲಿ ನೆನೆಗುಂದಿಗೆ ಬಿಳುವ ಅರಣ್ಯವಾಸಿಗಳ ಸಮಸ್ಯೆಗಳ ಕುರಿತು ೩೨ ವರ್ಷ ನಿರಂತರ ಹೋರಾಟ ದಾಖಲಾರ್ಹ. ಇತಿಹಾಸದಲ್ಲಿ ಜೀವಂತಿಕೆಯ ಹೋರಾಟದ ಮೂಲಕ ೩೩ ನೇ ವರ್ಷಕ್ಕೆ ಅರಣ್ಯವಾಸಿಗಳ ಹೋರಾಟ ಪಾದಾರ್ಪಣೆ ಮಾಡುತ್ತಿರುವುದು, ಜಿಲ್ಲೆಯ ಇತಿಹಾಸ ಸ್ವತಂತ್ರ ಸಂಗ್ರಾಮದ ನಂತರ, ಮಲೆನಾಡು ಮತ್ತು ಕರಾವಳಿ ಪ್ರದೇಶದಲ್ಲಿನ ದೀರ್ಘ ಕಾಲದ ದಾಖಲೆಯ ಹೋರಾಟದ ಪುಟಕ್ಕೆ ಸೇರಿದೆ ಎಂದರೇ ತಪ್ಪಾಗಲಾರದು.
ಅನುಷ್ಠಾನದಲ್ಲಿ ವೈಫಲ್ಯ:
ಅರಣ್ಯ ಭೂಮಿಯ ಹಕ್ಕಿನ ಸಮಸ್ಯೆಗೆ ರಾಜಕೀಯ ಪರಿಹಾರದಿಂದ ಸಾಧ್ಯವಿಲ್ಲ. ಕಾನೂನಾತ್ಮಕ ಪರಿಹಾರದಿಂದ ಮಾತ್ರ ಸಾಧ್ಯ. ರಾಜಕೀಯ ಇಚ್ಛಾಶಕ್ತಿ ಕೊರತೆ, ಕಾನೂನಿಗೆ ವ್ಯತಿರಿಕ್ತವಾಗಿ ಅರ್ಜಿಗಳ ತೀರಸ್ಕಾರ, ಮಂಜೂರಿ ಪ್ರಕ್ರಿಯೆಗೆ ನಿರ್ದಿಷ್ಟವಾದ ಕಾಲಮಾನದಂಡ ಇಲ್ಲದಿರುವಿಕೆ ಮತ್ತು ಕಾನೂನನ್ನ ಅಪಾರ್ಥೈಸುವಿಕೆ ಮುಂತಾದವುಗಳಿAದ ಅರಣ್ಯವಾಸಿಗಳು ಭೂಮಿ ಹಕ್ಕಿನಿಂದ ವಂಚಿತರಾಗುವ ಪ್ರಸಂಗ ಬಂದೊದಗಿದೆ.