ಶಾಲಾ ಕೊಠಡಿಯಲ್ಲೇ ಶಿಕ್ಷಕನೋರ್ವ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿ ಅತ್ಯಾಚಾರಕ್ಕೆ ಯತ್ನ-ಕಾಮುಕ ಶಿಕ್ಷಕ ಅರೆಸ್ಟ್
ಕಲಬುರಗಿ : ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕನೋರ್ವ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದು, ಆತನನ್ನು ಅರೆಸ್ಟ್ ಮಾಡಲಾಗಿದೆ.ಸದ್ಯ ಆರೋಪಿ ಶಿಕ್ಷಕ ಮಲ್ಲಿಕಾರ್ಜುನ ಕುಮಸಿ ಅವರನ್ನು ಡಿಡಿಪಿಐ ಸೂರ್ಯಕಾಂತ ಮದಾನೆ ಅಮಾನತು ಮಾಡಿದ್ದಾರೆ.ಶಾಲಾ ತರಗತಿಯಲ್ಲಿ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದಲ್ಲಿ ಆಳಂದ ಠಾಣೆಯ ಪೊಲೀಸರು ಮಲ್ಲಿಕಾರ್ಜುನನ್ನು ಬಂಧಿಸಿದ್ದಾರೆ.
ಕರ್ತವ್ಯ ಲೋಪ ಎಸಗಿದ್ದು, ಮೇಲ್ನೋಟಕ್ಕೆ ಸಾಬೀತಾಗಿದೆ. ರಾಜ್ಯ ನಾಗರಿಕ ನಿಯಮಗಳ ಅನ್ವಯ ತಕ್ಷಣದಿಂದಲೇ ಜಾರಿಗೆ ಬರುವಂತೆ ಇಲಾಖೆಯ ವಿಚಾರಣೆ ಕಾಯ್ದಿರಿಸಿ, ಮಲ್ಲಿಕಾರ್ಜುನನ್ನು ಸೇವೆಯಿಂದ ಅಮಾನತುಗೊಳಿಸಿ ಡಿಡಿಪಿಐ ಆದೇಶ ಹೊರಡಿಸಿದ್ದಾರೆ.ಮಧ್ಯಾಹ್ನ ಬಿಸಿಯೂಟ ಮಾಡಿದ ಬಳಿಕ ಬಾಲಕಿ ಶಾಲಾ ಕೋಣೆಗೆ ತೆರಳಿದ್ದಳು. ಶಾಲಾ ಕೋಣೆಯ ಬಾಗಿಲು ಹಾಕಿ ಒಳಗೆ ಬಂದ ಶಿಕ್ಷಕ ಮಲ್ಲಿಕಾರ್ಜುನ, ಬಾಲಕಿಯಿಂದ ಕಿಟಕಿಗಳನ್ನು ಮುಚ್ಚಿಸಿ ಆ ಬಳಿಕ ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.
ಬಾಲಕಿ ಚೀರಾಡುತ್ತಿದ್ದಂತೆ ಅಲ್ಲಿಂದ ಓಡಿ ಹೋದ ಎಂದು ಪೊಲೀಸರು ತಿಳಿಸಿದ್ದಾರೆ. ಗಾಬರಿಗೊಂಡ ವಿದ್ಯಾರ್ಥಿನಿ ತನ್ನ ತಂಗಿಯೊಂದಿಗೆ ಮನೆಗೆ ಹೋಗಿ, ಪೋಷಕರಿಗೆ ನಡೆದ ಘಟನೆಯನ್ನು ತಿಳಿಸಿದ್ದಾಳೆ.
ಪೋಷಕರು ಮುಖ್ಯ ಶಿಕ್ಷಕರ ಗಮನಕ್ಕೆ ತಂದ ಬಳಿಕ ದೂರು ನೀಡಿದ್ದಾರೆ. ಆರೋಪಿ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.