ಪರಿಸ್ಥಿತಿಗೆ ಹೆದರಿ ಹತಾಶರಾಗುವುದು ಮುಸ್ಲಿಮರ ಜಾಯಮಾನವಲ್ಲ; ದ್ವೇಷ ಮತ್ತು ಹಗೆತನವನ್ನು ಪ್ರೀತಿಯಿಂದ ಎದುರಿಸುವಂತೆ ಮೌಲಾನ್ ಅಬ್ದುಲ್ ಅಲೀಮ್ ಖತೀಬಿ ಕರೆ
ಭಟ್ಕಳ: ದೇಶದಲ್ಲಿ ಒಂದು ಕೋಮಿನ ವಿರುದ್ಧ ದ್ವೇಷ ಹಗೆತನದ ವಾತವರಣ ನಿರ್ಮಿಸಲಾಗುತ್ತಿದ್ದು ಮುಸ್ಲಿಮರು ಪರಿಸ್ಥಿತಿಗೆ ಹೆದರಿ ಹತಾಶರಾಗುವುದು ಬೇಡ ದ್ವೇಷ ಮತ್ತು ಹಗೆತನಕ್ಕೆ ಪ್ರೀತಿ ಮತ್ತು ಕರುಣೆಯ ಮೂಲಕ ಉತ್ತರಿಸಬೇಕಾಗಿದೆ ಎಂದು ಜಾಮಿಯಾ ಮಸೀದಿ ಚಿನ್ನದ ಪಳ್ಳಿಯ ಖತೀಬ್ ಮತ್ತು ಇಮಾಮ್ ಮೌಲಾನ ಅಬ್ದುಲ್ ಅಲೀಮ್ ಖತೀಬಿ ನದ್ವಿ ಕರೆ ನೀಡಿದರು.
ಅವರು ಶನಿವಾರ ಇಲ್ಲಿನ ಬಂದರ್ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ಈದುಲ್ ಫಿತ್ರ್ ನಮಾಜ್ ನಿರ್ವಹಿಸಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ ಜನಸ್ಥೋಮವನ್ನು ಉದ್ದೇಶಿಸಿ ಈದ್ ಸಂದೇಶ ನೀಡಿದರು.
ದೇಶದಲ್ಲಿ ಒಂದು ಕೋಮಿನ ವಿರುದ್ಧ ಪೂರ್ವಗ್ರಹಪೀಡಿತರಾಗಿ ಅವರ ಮೇಲೆ ದಬ್ಬಾಳಿಕೆಯನ್ನು ನಡೆಸಲಾಗುತ್ತಿದೆ. ಜನರಲ್ಲಿ ಸಂಕುಚಿತ ಮನೋಭಾವನೆ ಬೆಳೆಸಲಾಗುತ್ತಿದೆ.ಇಂತಹ ಸಂದರ್ಭದಲ್ಲಿ ಈದುಲ್ ಫಿತ್ರ್ ಪ್ರೀತಿ-ಪ್ರೇಮ, ಮಾನವ ಅನುಕಂಪ, ಕರುಣೆ ಹಾಗೂ ಒಬ್ಬರು ಇನ್ನೊಬ್ಬರನ್ನು ಅಪ್ಪಿಕೊಳ್ಳುವ ಸಂದೇಶ ನೀಡುತ್ತಿದೆ. ನಿಮ್ಮ ಶತ್ರುಗಳನ್ನು ಕ್ಷಮಿಸುವ ಅವರನ್ನು ಬಾಚಿ ತಬ್ಬಿಕೊಳ್ಳಿ ಎನ್ನುವ ಸಂದೇಶ ನೀಡುತ್ತದೆ. ಯಾರಿಂದ ನೀವು ತೊಂದರೆಗೊಳಗಾಗಿದ್ದೀರೋ ಅವರನ್ನೂ ಕೂಡ ನೀವು ಕ್ಷಮಿಸಿರಿ ಎಂಬುದು ಈ ರಮಝಾನ್ ಹಬ್ಬದ ಸಂದೇಶವಾಗಿದೆ. ಈ ಈದುಲ್ ಫಿತ್ರ್ ಹಬ್ಬ ಬಡವರ, ನಿರ್ಗತಿಕರ ಕಾಳಜಿ ವಹಿಸುವ ಸಂದೇಶ ನೀಡುತ್ತಿದೆ. ನಾವು ಬೈಗುಳದ ಉತ್ತರ ಪ್ರೀತಿಯಿಂದ ನೀಡಬೇಕಾಗಿದೆ, ನಿರ್ದಯಿಗಳ ಎದುರು ದಯೆಯನ್ನು ಪ್ರದರ್ಶಿಸಬೇಕಾಗಿದೆ. ಕಠಿಣ ಮತ್ತು ಕಠೋರ ಮಾತುಗಳ ಉತ್ತರ ಕರುಣೆ ಮತ್ತು ಪ್ರೀತಿಯಿಂದ ನೀಡಬೇಕಾಗಿದೆ ಎಂದು ಮೌಲಾನ ಈದ್ ಸಂದೇಶದ ಮೂಲಕ ಸಮಸ್ತ ಮುಸ್ಲಿಮ್ ಬಾಂಧವರಿಗೆ ಕರೆ ನೀಡಿದರು.
ಭಟ್ಕಳದ ಜಾಮಿಯಾ ಮಸೀದಿಯಿಂದ ಮೆರವಣೆಗೆ ಮೂಲಕ ಈದ್ಗಾ ಮೈದಾನದ ಸೇರಿದ ಸಾವಿರಾರು ಮುಸ್ಲಿಮ್ ಬಾಂಧವರು ಈದ್ ನ ವಿಶೇಷ ಪ್ರಾರ್ಥನೆಯ ಬಳಿಕ ಒಬ್ಬರು ಮತ್ತೊಬ್ಬರನ್ನು ಅಪ್ಪಿಕೊಳ್ಳುವುದರ ಮೂಲಕ ಈದ್ ಮುಬಾರಕ್ ಈದ್ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.