ಹೊನ್ನಾವರ: ಕರ್ನಾಟಕ ಸರ್ಕಾರ, ಜಲಾನಯನ ಅಭಿವೃದ್ಧಿ ಇಲಾಖೆ ಕೃಷಿ ಇಲಾಖೆ ಹಾಗೂ ಸ್ಕೊಡವೆಸ್ ಸಂಸ್ಥೆಯ ಸಹಯೋಗದಲ್ಲಿ ರಚಿತವಾದ ಹಳದಿಪುರ ರೈತ ಉತ್ಪಾದಕ ಕಂಪನಿಯಿಂದ ರೈತರಿಗಾಗಿ ಆಯೋಜಿಸಿದ ಭತ್ತ, ಶೇಂಗಾ ಹಾಗೂ ಅಡಿಕೆ ಬೆಳೆಯ ಸಮಗ್ರ ನಿರ್ವಹಣೆಯ ತರಬೇತಿ ಕಾರ್ಯಕ್ರಮವು ಹಳದಿಪುರದ ಆರ್.ಬಿ.ಹೆಗಡೆಯವರ ಮನೆ ಅವರಣದಲ್ಲಿ ಯಶಸ್ವಿಯಾಗಿ ನಡೆಯಿತು. ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ. ಜಿ.ವಿ.ನಾಯಕ ಅವರು ಭತ್ತದ ಬೀಜ ಬಿತ್ತನೆ, ನಾಟಿ ಪದ್ದತಿಯ ಪ್ರಕಾರಗಳು, ರೋಗರುಜಿನಗಳು, ಶೇಂಗಾ ಮತ್ತು ಅಡಿಕೆ ಕೃಷಿಯಲ್ಲಿನ ಸವಾಲುಗಳು, ಪ್ರಾಯೋಗಿಕವಾಗಿ ಎದುರಾಗುವ ಸಮಸ್ಯೆಗಳು ಕುರಿತು ತಿಳಿಸಿ ಅವುಗಳನ್ನು ನಿರ್ವಹಿಸುವ ಬಗೆಗೆ ಸವಿವರವಾದ ಮಾಹಿತಿ ನೀಡಿದರಲ್ಲದೇ ಸಂವಾದದಲ್ಲಿ ರೈತರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು. ಸಾವಯವ ಕೃಷಿ ಅನೇಕ ಸಮಸ್ಯೆಗೆ ಪರಿಹಾರ ನೀಡಬಲ್ಲದು ಎಂಬುದನ್ನೂ ತಿಳಿಸಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತರಿದ್ದ ಕೃಷಿ ಅಧಿಕಾರಿ ಲಕ್ಷ್ಮೀ ದಳವಾಯಿ ಇಲಾಖೆಯಿಂದ ರೈತ ಉತ್ಪಾದಕ ಕಂಪನಿಗಳಿಗೆ ನೀಡುವ ಪ್ರೋತ್ಸಾಹದ ಕುರಿತು ಮಾತನಾಡಿದರು. ಪ್ರಗತಿಪರ ರೈತರಾದ ಬಿ.ಆರ್.ಹೆಗಡೆಯವರು ರೈತರು ಪ್ರಸ್ತುತ ಎದುರಿಸುತ್ತಿರುವ ವಾಸ್ತವ ಸಮಸ್ಯೆಗಳ ಕುರಿತು ಪ್ರಸ್ತಾಪಿಸಿ ಅದರ ಪರಿಹಾರಕ್ಕಾಗಿ ಸರ್ಕಾರ ಅಗತ್ಯವಾಗಿ ಕೈಗೊಳ್ಳಬೇಕಾದ ಪರಿಹಾರ ಕ್ರಮಗಳ ಬಗೆಗೂ ಗಮನ ಸೆಳೆದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಂಪನಿಯ ಅಧ್ಯಕ್ಷ ಬಿ.ಆರ್. ಚಂದ್ರಶೇಖರ ಮಾತನಾಡಿ
ರೈತರಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ಕಂಪನಿಯ ಮೂಲಕ ಗೊಬ್ಬರವನ್ನು ವಿತರಿಸುವ ವ್ಯವಸ್ಥೆ ಮಾಡಲಾಗುತ್ತಿದೆಯಲ್ಲದೇ ಕೃಷಿಕರೆಲ್ಲರೂ ಸಹಕಾರಿ ತತ್ವದಲ್ಲಿ ತಮ್ಮ ಭೂಮಿಯಲ್ಲಿ ಕೃಷಿ ಕಾರ್ಯವನ್ನು ಮಾಡಲು ಸಿದ್ಧರಾದಲ್ಲಿ ಸಂಸ್ಥೆಯ ಮೂಲಕ ಸಾಧ್ಯವಾಗಬಹುದಾದ ಎಲ್ಲ ಸಹಾಯ ಸಹಕಾರ ಒದಗಿಸಲು ಸಿದ್ಧ ಎಂದು ನುಡಿದರು. ಸ್ಕೊಡವೆಸ್ ಸಂಸ್ಥೆಯ ಜಿಲ್ಲಾ ಸಂಯೋಜಕ ಗಂಗಾಧರ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿ ಸರ್ಕಾರ ರೈತ ಉತ್ಪಾದಕ ಕಂಪನಿಯ ಸ್ಥಾಪನೆಯ ಯೋಜನೆಯ ಉದ್ದೇಶ ಅದರಿಂದ ಕೃಷಿಕರಿಗೆ ಆಗುವ ಅನುಕೂಲತೆಗಳ ಕುರಿತು ತಿಳಿಸಿದರು. ಕಾರ್ಯಕ್ರಮದಲ್ಲಿ ಕಂಪನಿಯ ನಿರ್ದೇಶಕರಾದ ಅಜಿತ್ ನಾಯ್ಕ, ವಾಸುದೇವ ಹೆಬ್ಬಾರ, ಗಜಾನನ ಶೇಟ್, ಮುಖ್ಯ ಕಾರ್ಯನಿರ್ವಾಹಕಿ ಆಶಾ ಭಟ್, ಡಿಈಓ ಸಂಗೀತಾ ಹಾಗೂ ನೂರಾರು ಕೃಷಿಕರು ಹಾಜರಿದ್ದರು.