ರಂಗಭೂಮಿ ಕಲಾವಿದರು ಕಲಾತಪಸ್ವಿಗಳು : ಡಾ.ಸಯ್ಯದ್ ಝಮೀರುಲ್ಲ ಷರೀಫ್.
ಭಟ್ಕಳ : ರಂಗಭೂಮಿ ಕಲೆಯನ್ನು ಉಳಿಸಿ ಬೆಳೆಸುತ್ತಿರುವ ಕಲಾವಿದರು ಕಲಾತಪಸ್ವಿಗಳು ಎಂದು ಸಾಹಿತಿ ಡಾ.ಸಯ್ಯದ ಝಮಿರುಲ್ಲ ಷರೀಫ್ ನುಡಿದರು.
ಅವರು ಇಲ್ಲಿನ ಕೊಣಾರದ ಸ.ಹಿ.ಪ್ರಾ.ಶಾಲೆಯ ಆವರಣದಲ್ಲಿ ನಡೆದ ಶ್ರೀ ಗುರು ರಂಗಭೂಮಿ, ಜನಪದ ಹಾಗೂ ಸಾಂಸ್ಕೃತಿಕ ಕಲಾ ಸಂಘದ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಸಾಹಿತ್ಯ ಪರಿಷತ್ ವತಿಯಿಂದ ಹಿರಿಯ ರಂಗಭೂಮಿ ಕಲಾವಿದರನ್ನು ಸನ್ಮಾನಿಸಿ ಮಾತನಾಡುತ್ತಿದ್ದರು. ಇಂದು ಟಿ.ವಿ. ಮತ್ತು ಮೊಬೈಲ್ ನಿಂದಾಗಿ ನಾಟಕ ಮತ್ತಿತರ ರಂಗಕಲೆಗಳೆಡೆಗಿನ ಆಸಕ್ತಿ ಕಡಿಮೆಯಾಗುತ್ತಿದೆ. ರಂಗ ಕಲೆ ಮತ್ತು ಕಲಾವಿದರನ್ನು ಉಳಿಸಿ ಬೆಳೆಸುವ ಕಾರ್ಯವನ್ನು ನಾವೆಲ್ಲ ಮಾಡಬೇಕಿದೆ ಸಂಘವು ಕಲಾವಿದರ ಆರ್ಥಿಕ ಮತ್ತು ಅನಾರೋಗ್ಯದ ಸಂಕಷ್ಟಗಳ ಸಂದರ್ಭದಲ್ಲಿ ನೆರವಾಗಲು ಒಂದು ನಿಧಿಯನ್ನು ಸ್ಥಾಪಿಸಿಕೊಳ್ಳಬೇಕು. ಅದಕ್ಕೆ ಎಲ್ಲ ದಾನಿಗಳ ಕಲಾಭಿಮಾನಿಗಳ ನೆರವು ಸಿಗಬೇಕಿದೆ ಎಂದರಲ್ಲದೇ ಭಟ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ರಂಗಭೂಮಿ ಕಲಾವಿದರನ್ನು ಸನ್ಮಾನಿಸುತ್ತಿರುವುದು ನಿಜಕ್ಕೂ ಅಭಿನಂದನಾರ್ಹ ಕಾರ್ಯ ಎಂದು ನುಡಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಸಾಪ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ಮಾತನಾಡಿ ಸಾಹಿತ್ಯದ ಪ್ರಕಾರಗಳಲ್ಲೊಂದಾದ ನಾಟಕ ಸಾಹಿತ್ಯವನ್ನು ಜನರಿಗೆ ತಲುಪಿಸುವಲ್ಲಿ ರಂಗಭೂಮಿ ಕಲಾವಿದರ ಪಾತ್ರ ಮುಖ್ಯವಾದುದು. ಶ್ರೀ ಗುರು ರಂಗಭೂಮಿ ಕಲಾ ಸಂಘದ ದಶಮಾನೋತ್ಸವದ ಸಂದರ್ಭದಲ್ಲಿ ಹಿರಿಯ ರಂಗಕಲಾವಿದರನ್ನು ಸಾಹಿತ್ಯ ಪರಿಷತ್ ವತಿಯಿಂದ ಸನ್ಮಾನಿಸಲಾಗುತ್ತಿದೆ. ಕಲೆ, ಸಾಹಿತ್ಯ ಸಂಸ್ಕೃತಿಯ ಜೊತೆಗೆ ವಿವಿಧ ಕ್ಷೇತ್ರದ ಸಾಧಕರನ್ನು ಪರಿಷತ್ತಿನ ಮೂಲಕ ಗುರುತಿಸಿ ಗೌರವಿಸುವ ಕೆಲಸವನ್ನು ಸಾಹಿತ್ಯ ಪರಿಷತ್ತು ಮಾಡುತ್ತಿದೆ ಎಂದರು.
ಸಾಹಿತ್ಯ ಪರಿಷತ್ ವತಿಯಿಂದ ಹಿರಿಯ ರಂಗಭೂಮಿ ಕಲಾವಿದರಾದ ಶ್ರೀಧರ ನಾಯ್ಕ ಆಸರಕೇರಿ, ವೆಂಕಟೇಶ ನಾಯ್ಕ ತಲಗೋಡು, ಗಣಪತಿ ಆಚಾರ್ಯ, ದೇವನಾಯ್ಕ ಹಾಗೂ ಜಗದೀಶ ನಾಯ್ಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದ ವೇದಿಕೆಯಲ್ಲಿ ಶ್ರೀ ಗುರು ರಂಗಭೂಮಿ ಕಲಾ ಸಂಘದ ಅಧ್ಯಕ್ಷ ಜಗದೀಶ ನಾಯ್ಕ, ಕಸಾಪ ಗೌರವ ಕೋಶಾಧ್ಯಕ್ಷ ಶ್ರೀಧರ ಶೇಟ್, ಗೌರವ ಕಾರ್ಯದರ್ಶಿ ನಾರಾಯಣ ನಾಯ್ಕ, ಸಂಘಟನಾ ಕಾರ್ಯದರ್ಶಿ ಸಂತೋಷ ಆಚಾರ್ಯ, ಸಿದ್ಧಿವಿನಾಯಕ ಗೆಳೆಯರ ಬಳಗದ ಅಧ್ಯಕ್ಷ ನಾಗೇಶ ನಾಯ್ಕ, ಕೊಣಾರ ಗ್ರಾ.ಪಂ.ಮಾಜಿ ಅಧ್ಯಕ್ಷ ರಾಧಾಕೃಷ್ಣ ಉಪಾಧ್ಯಾಯ, ಶಾಲಾ ಎಸ್.ಡಿ.ಎಂ.ಸಿ.ಅಧ್ಯಕ್ಷ ಸಂಕಯ್ಯ ಗೊಂಡ, ರಂಗಭೂಮಿ ಸಂಘದ ಗೌರವಾಧ್ಯಕ್ಷ ಅಶೋಕ ಮಹಾಲೆ, ಮಾಜಿ ಗೌರವಾಧ್ಯಕ್ಷ ಕೆ.ಆರ್.ನಾಯ್ಕ, ಶ್ರೀಧರ ಹೆಗಡೆ ಮುಂತಾದವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಶ್ರೀ ಗುರು ರಂಗಭೂಮಿ ಸಂಘದವರು ಸಾಹಿತಿ ಡಾ.ಸಯ್ಯದ ಜಮೀರುಲ್ಲ ಷರೀಫ್ , ಕಸಾಪ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ಹಾಗೂ ಗೌರವ ಕೋಶಾಧ್ಯಕ್ಷ ಶ್ರೀಧರ ಶೇಟ್ ಅವರನ್ನು ಸನ್ಮಾನಿಸಿ ಗೌರವಿಸಿದರು. ಕಾರ್ಯಕ್ರಮದಲ್ಲಿ ರಂಗಭೂಮಿ ಕಲಾ ಸಂಘದ ಸದಸ್ಯರು ಹಾಗೂ ಊರ ನಾಗರಿಕರು ಉಪಸ್ಥಿತರಿದ್ದರು. ಈ ಹಿಂದೆಯೂ ಸಾಹಿತ್ಯ ಪರಿಷತ್ತಿನಿಂದ ರಂಗಭೂಮಿ ಕಲಾವಿದರಾದ ಅಶೋಕ ಮಹಾಲೆ, ಕೆ.ಆರ್.ನಾಯ್ಕ, ಎಸ್.ಎನ್.ದೇವಾಡಿಗ, ಗೋವಿಂದ ದೇವಾಡಿಗ, ನಜೀರ್ ಸಾಬ್ ಮುಂತಾದವರನ್ನು ಸನ್ಮಾನಿಸಿರುವುದನ್ನು ಸ್ಮರಿಸಬಹುದು.