ಅಂಕೋಲಾದಲ್ಲಿ ಬೈಕ್ ಹಾಗೂ ಟ್ರ್ಯಾಕ್ಸ್ ವಾಹನ ನಡುವೆ ಭೀಕರ ಅಪಘಾತ – ಬೈಕ್ ಸವಾರ ಸ್ಥಳದಲ್ಲೇ ಸಾವು
ಅಂಕೋಲಾ : ಟ್ಯಾಕ್ಸ್ ವಾಹನ ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಸುಟ್ಟು ಕರಕಲಾಗಿ ಸಾವಿನ್ನೊಪ್ಪಿದ ಘಟನೆ ತಾಲೂಕಿನ ರಾ.ಹೆ.66 ರ ಹಟ್ಟಿಕೇರಿ ಬ್ರಿಡ್ಜ್ ಸಮೀಪ ಬುಧವಾರ ನಸುಕಿನ ವೇಳೆಯಲ್ಲಿ ನಡೆದಿದೆ.
ತಾಲೂಕಿನ ಹಾರವಾಡ ಗ್ರಾಪಂ. ವ್ಯಾಪ್ತಿಯ ತರಂಗಮೇಟ್ದ ಸುಮಂತ ಯಾದೋಬಾ ಹರಿಕಂತ್ರ (23) ಎಂಬಾತನೇ ಸ್ಥಳದಲ್ಲಿ ಸುಟ್ಟು ಕರಕಲಾಗಿ ಮೃತಪಟ್ಟ ಬೈಕ್ ಸವಾರ ಎಂದು ಗುರುತಿಸಲಾಗಿದೆ.
ಸಹ ಸವಾರರಾದ ಹಾರವಾಡ ಸೀಬರ್ಡ್ ಕಾಲೋನಿಯ ಸುಮೀತ ರಾಮಚಂದ್ರ ಹರಿಕಂತ್ರ (22), ತರಂಗಮೇಟ್ದ ಚಾಣಕ್ಯ ರಾಮಚಂದ್ರ ಹರಿಕಂತ್ರ (23) ಗಂಬೀರ ಗಾಯಗೊಂಡಿದ್ದು, ಇವರನ್ನು ತಾಲೂಕ ಆಸ್ಪತ್ರೆಗೆ ಸಾಗಿಸಲಾಗಿ, ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಕಾರವಾರ ಕ್ರಿಮ್ಸ್ಗೆ ಕೊಂಡೊಯ್ಯಲಾಗಿದೆ.
ಬೈಕ್ ಸವಾರರು ಬೆಳಂಬಾರದಲ್ಲಿ ಮಂಗಳವಾರ ರಾತ್ರಿ ನಡೆದ ಜಾತ್ರಾ ಉತ್ಸವ ಮುಗಿಸಿ ಬೈಕ್ನಲ್ಲಿ ಹಾರವಾಡಕ್ಕೆ ಬರುತ್ತಿದ್ದ ಸಂದರ್ಭದಲ್ಲಿ ಈ ಅವಘಡ ನಡೆದಿದೆ. ಯಾದೋಬಾ ಲಿಂಗಪ್ಪ ಹರಿಕಂತ್ರ ಪೊಲೀಸ್ ದೂರು ಸಲ್ಲಿಸಿದರು. ಪಿಐ ಶ್ರೀಕಾಂತ ತೋಟಗಿ, ಪಿಎಸ್ಐ ಉದ್ದಪ್ಪ ಧರೆಪ್ಪನವರ್ ಘಟನಾ ಸ್ಥಳಕ್ಕೆ ಭೇಟಿ ನೀಡಿದರು. ಪಿಎಸ್ಐ ಸುನೀಲ ಹುಲ್ಲೊಳ್ಳಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಡಿಕ್ಕಿ ಪಡಿಸಿದ ವಾಹನ ಚಾಲಕ ಸ್ಥಳದಿಂದ ಪರಾರಿಯಾಗಿರುತ್ತಾನೆ.