ತನ್ನ ಮೇಲೆ ಪೆಟ್ರೊಲ್ ಸುರಿದುಕೊಂಡು ಜೋಯಿಡಾ ಪೊಲೀಸ್ ಠಾಣೆಯ ಮುಂದೆ ಬೆಂಕಿ ಹಚ್ಚಿಕೊಂಡ ಆತ್ಮಹತ್ಯೆಗೆ ಯತ್ನಿಸದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಬೆಳಗಾವಿ ಆಸ್ಪತ್ರೆಯಲ್ಲಿ ಸಾವು
ಜೊಯಿಡಾ: ತನ್ನ ಮೇಲೆ ದಾಖಲಾಗಿರುವ ಪ್ರಕರಣ ಹಿಂಪಡೆಯುವoತೆ ಒತ್ತಾಯಿಸಲು ಪೊಲೀಸ್ ಠಾಣೆಗೆ ಬಂದಿದ್ದ ಭಾಸ್ಕರ ಬೋಡೆಲ್ಕರ್ ಎಂಬಾತ ಪೊಲೀಸ್ ಠಾಣೆಯನ್ನು ಸ್ಪೋಟಿಸುವ ಬೆದರಿಕೆ ಒಡ್ಡಿದ್ದಾನೆ. ಇವನ ಮಾತಿಗೆ ಪೊಲೀಸರು ಬೆಲೆ ಕೊಡದಿದ್ದಾಗ ತನ್ನ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ.
ಭಾಸ್ಕರ್ ವಿರುದ್ಧ ದಾಖಲಾದ ಜೂಜಾಟ ಪ್ರಕರಣವೊಂದು ದಾಖಲಾಗಿದ್ದು, ಅದು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. ಜೂಜಾಟದಲ್ಲಿ ತನ್ನಿಂದ ವಶಪಡಿಸಿಕೊಂಡ ಮೊತ್ತಕ್ಕಿಂತ ಕಡಿಮೆ ಮೊತ್ತವನ್ನು ನ್ಯಾಯಾಲಯಕ್ಕೆ ತೋರಿಸಲಾಗಿದೆ ಎಂಬ ಆರೋಪ ಭಾಸ್ಕರನದ್ದಾಗಿತ್ತು. ಈ ಬಗ್ಗೆ ಮಾತನಾಡುವುದಕ್ಕಾಗಿ ಆತ ರಾಮನಗರ ಪೊಲೀಸ್ ಠಾಣೆಗೆ ಬಂದಿದ್ದ. ಪಿಎಸ್ಸೈ ತನ್ನ ಹಣವನ್ನು ಮರಳಿಸಬೇಕು ಎಂದು ಆತ ಒತ್ತಾಯಿಸುತ್ತಿದ್ದ. ಮದ್ಯ ಸೇವಿಸಿ ಪೊಲೀಸ್ ಠಾಣೆಗೆ ಬಂದ ಆತ ಸಿಕ್ಕಸಿಕ್ಕವರಿಗೆ ನಿಂದಿಸುತ್ತಿದ್ದ. ಅಲ್ಲಿದ್ದ ಪೊಲೀಸರ ಜೊತೆಯೂ ವಾಗ್ವಾದ ನಡೆಸಿದ್ದ. ಇದೇ ಕಾರಣದಿಂದ ಪೊಲೀಸರು ಕುಡಿದು ಬೈಕ್ ಓಡಿಸಿದ ಬಗ್ಗೆ ಇನ್ನೊಂದು ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದರು. ಇದರಿಂದ ಆಕ್ರೋಶಗೊಂಡ ಆತ ಇಡೀ ಪೊಲೀಸ್ ಠಾಣೆಯನ್ನೇ ಸ್ಪೋಟಿಸುವುದಾಗಿ ಬೆದರಿಕೆ ಒಡ್ಡಿದ್ದ. ನಂತರ ತನ್ನ ಮೇಲೆ ಪೆಟ್ರೊಲ್ ಸುರಿದುಕೊಂಡು ಠಾಣೆಯ ಮುಂದೆ ಬೆಂಕಿ ಹಚ್ಚಿಕೊಂಡ. ಇದನ್ನು ನೋಡಿದ ಪೊಲೀಸರು ಬೆಂಕಿ ಆರಿಸುವ ಪ್ರಯತ್ನ ನಡೆಸಿದರೂ ಪ್ರಯೋಜನವಾಗಲಿಲ್ಲ. ಗಾಯಗೊಂಡ ಆತನನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿಗೆ ಕಳುಹಿಸಲಾಗಿತ್ತು.ಇದೀಗ ಚಿಕಿತ್ಸೆ ಫಲಕಾರಿಯಾಗದೆ ಆತ ಬೆಳಗಾವಿ ಆಸ್ಪತ್ರೆಯಲ್ಲಿ ಮರಣ ಹೊಂದಿದ್ದಾನೆ.