ಸಿಮೆಂಟ್ ಕಂಬ ಮೈಮೇಲೆ ಬಿದ್ದು
ಹೆಸ್ಕಾಂ ಕಚೇರಿಗೆ ಕೂಲಿ ಕೆಲಸಕ್ಕೆಂದು ಬಂದ ಕಾರ್ಮಿಕ ಸಾವು
ಭಟ್ಕಳ: ಇಲ್ಲಿನ ಹೆಸ್ಕಾಂ ಕಚೇರಿಗೆ ಕೂಲಿ ಕೆಲಸಕ್ಕೆಂದು ಬಂದ ವ್ಯಕ್ತಿಯೋರ್ವ ಕೆಲಸ ಮಾಡುತ್ತಿರುವಾಗಲೇ ಆಯತಪ್ಪಿ ಸಿಮೆಂಟ್ ಕಂಬ ಮೈಮೇಲೆ ಬಿದ್ದು ಗಂಭೀರವಾಗಿ ಗಾಯಗೊಂಡು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವ ಘಟನೆ ನಡೆದಿದೆ.
ಮೃತ ವ್ಯಕ್ತಿಯನ್ನು ಇಲ್ಲಿನ ಕಟಗಾರ ಕೊಪ್ಪದ ನಿವಾಸಿ ದಾಮೋದರ ಈರಯ್ಯ ಗೊಂಡ (32) ಎಂದು ಗುರುತಿಸಲಾಗಿದ್ದು, ತೊಡೆಯ ಭಾಗಕ್ಕೆ ಬಲವಾದ ಪೆಟ್ಟು ತಗುಲಿ ಗಂಭೀರವಾಗಿ ಗಾಯಗೊಂಡ ಇವರನ್ನು ಚಿಕಿತ್ಸೆಗಾಗಿ ಕುಂದಾಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ನಂತರ ಇದ್ದಕ್ಕಿದ್ದಂತೆ ಉಸಿರಾಟದ ಸಮಸ್ಯೆಯುಂಟಾದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವ ಬಗ್ಗೆ ಮಾಹಿತಿ ಲಭಿಸಿದೆ. ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.