ಅಂಕೋಲಾ ತಾಲ್ಲೂಕಿನ ಶಿರೂರು ಗುಡ್ಡ ಕುಸಿದ ಸ್ಥಳಕ್ಕೆ ಉತ್ತರ ಕನ್ನಡ ಸಂಸದರಾದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ ಭೇಟಿ ನೀಡಿ ಪರಿಶೀಲನೆ
ಅಂಕೋಲಾ-ಅಂಕೋಲಾ ತಾಲ್ಲೂಕಿನ ಶಿರೂರು ಗುಡ್ಡ ಕುಸಿದ ಸ್ಥಳಕ್ಕೆ ಸಂಸದರಾದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಇಂದು ಭೇಟಿ ನೀಡಿ ಶಿರೂರು ಬಳಿಯ ಗುಡ್ಡ ನಂತರ ಉಳುವರೆಯಲ್ಲಿನ ಸಂತ್ರಸ್ತ ಜನರನ್ನು ಭೇಟಿಯಾಗಿ ಅಹವಾಲು ಸ್ವೀಕರಿಸಿ ಸಂತ್ರಸ್ತ ಕುಟುಂಬಗಳಿಗೆ ಸಾಂತ್ವನ ಹೇಳಿದರು.ಸದ್ಯ ನಡೆಯುತ್ತಿರುವ ಕಾರ್ಯಾಚರಣೆ ಇನ್ನೂ ಚುರುಕುಗೊಳಿಸಲು ಅಧಿಕಾರಿಗಳಿಗೆ ತಿಳಿಸಿ,ಈ ಅನಿರೀಕ್ಷಿತ ದುರ್ಘಟನೆಯಲ್ಲಿ ಜೀವ ಕಳೆದುಕೊಂಡ ಕುಟುಂಬಗಳಿಗೆ, ಮನೆ ಕಳೆದುಕೊಂಡವರಿಗೆ ಸೂಕ್ತ ಹಾಗೂ ಶಾಶ್ವತ ಪರಿಹಾರ ಕಲ್ಪಿಸಲು ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿದರು.
ಕಣ್ಮರೆಯಾದವರ ಹುಡುಕಾಡಕ್ಕೆ ಕೈಗೊಂಡ ಕ್ರಮದ ಪ್ರಗತಿಯ ಕುರಿತು ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳಲಾಯಿತು. ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವ ತಂಡಗಳ ಮಾಹಿತಿ ಪಡೆದು ನಾಪತ್ತೆಯಾದ ಸ್ಥಳೀಯರಾದ ಜಗನ್ನಾಥ ನಾಯ್ಕ, ಲೋಕೇಶ ನಾಯ್ಕ ಹಾಗೂ ಕೇರಳದ ಚಾಲಕ ಅರ್ಜುನ್ ಅವರನ್ನು ಶೀಘ್ರ ಪತ್ತೆ ಮಾಡುವಂತೆ ರಕ್ಷಣಾ ತಂಡಕ್ಕೆ ವಿನಂತಿಸಲಾಯಿತು.
ನಾಪತ್ತೆಯಾದ ಜಗನ್ನಾಥ ನಾಯ್ಕ ಅವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.ಶಿರೂರು ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವನ ಹೇಳಲಾಯಿತು. ಸರ್ಕಾರದಿಂದ ಪರಿಹಾರ ನೀಡುವ ಬಗ್ಗೆ ಚರ್ಚಿಸಲಾಯಿತು. ಮೇಲಿಂದ ಮೇಲೆ ಪ್ರವಾಹ ಬರುವುದರಿಂದ ಸ್ಥಳೀಯರಿಗೆ ಗಂಗಾವಳಿ ತಟದಲ್ಲಿ ಜೀವನ ನಡೆಸುವುದು ಕಷ್ಟವಾಗುತ್ತದೆ. ಅವರಿಗೆ ಕಂದಾಯ ಇಲಾಖೆಯ ಜಾಗಗಳನ್ನು ಗುರುತಿಸಿ ಮನೆ ನಿರ್ಮಿಸಿ ಕೊಡುವುದು. ಅವರ ಜೀವನಕ್ಕೆ ಆಧಾರ ಕಲ್ಪಿಸಿಕೊಡುವ ಕುರಿತು ಚರ್ಚಿಸಿದರು.
ಈ ಸಂದರ್ಭದಲ್ಲಿ ಕುಮಟಾ ಶಾಸಕರಾದ ಶ್ರೀ ದಿನಕರ್ ಶೆಟ್ಟಿ, ಮಾಜಿ ಶಾಸಕಿ, ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಶ್ರೀಮತಿ ರೂಪಾಲಿ ನಾಯ್ಕ್, ಸೇರಿದಂತೆ ಬಿಜೆಪಿ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.