ಕಾರವಾರ -ಅಂಕೋಲಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಿವಿಧ ಸಮಸ್ಯೆಗಳನ್ನು ಪರಿಹರಿಸಲು ಒತ್ತಾಯಿಸಿ ಉತ್ತರ ಕನ್ನಡ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಶ್ರೀಮತಿ ರೂಪಾಲಿ ನಾಯ್ಕ್
ಕಾರವಾರ-ಇತ್ತಿಚೆಗೆ ಭಾರಿ ಮಳೆಯಿಂದ ಚೆಂಡಿಯಾ, ತೋಡುರು, ಅಮದಳ್ಳಿ, ಅರಗಾ ಮತ್ತಿತರ ಕಡೆಗಳಲ್ಲಿ ಮನೆಗಳು ಜಲಾವೃತವಾಗುತ್ತಿವೆ. ಜನತೆ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿ ಹಾಗೂ ನೌಕಾನೆಲೆಯ ನಿರ್ಮಾಣ ಕಾಮಗಾರಿಗಳಿಂದ ನೀರು ಸರಾಗವಾಗಿ ಸಮುದ್ರಕ್ಕೆ ಹರಿದುಹೋಗದೆ ಗುಡ್ಡ ಬೆಟ್ಟಗಳಿಂದ ಹರಿದು ಬರುವ ನೀರು ಮನೆಗಳಿಗೆ ನುಗ್ಗುತ್ತಿದೆ. ಆ ಪ್ರದೇಶದ ಜನತೆಯ ಬದುಕು ಅಸಹನೀಯವಾಗಿದೆ ಹಾಗೂ ಅಂಕೋಲಾ ತಾಲ್ಲೂಕಿನ ಹಾರವಾಡ ಗೌಡಕೇರಿ, ಬೊಬ್ರುವಾಡದ ನದಿಬಾಗ ವ್ಯಾಪ್ತಿಯಲ್ಲಿ ನೀರು ಅಲ್ಲಿನ ಜನತೆ ಪ್ರತಿವರ್ಷ ಇದೇ ಬವಣೆಯನ್ನು ಅನುಭವಿಸುತ್ತಿದ್ದಾರೆ. ನೌಕಾನೆಲೆ ಹಾಗೂ ರಾಷ್ಟ್ರೀಯ ಹೆದ್ದಾರಿ ವಿಭಾಗದ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿ ಗುಡ್ಡ ಬೆಟ್ಟಗಳಿಂದ ಹರಿದುಬರುವ ನೀರು ಸರಾಗವಾಗಿ ಸಮುದ್ರಕ್ಕೆ ಹರಿದುಹೋಗುವಂತೆ ಶಾಶ್ವತ ಕ್ರಮ ಕೈಗೊಂಡು ಪ್ರತಿ ವರ್ಷ ಪ್ರವಾಹದ ಬವಣೆಯಿಂದ ಜನರನ್ನು ಪಾರು ಮಾಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಶ್ರೀಮತಿ ರೂಪಾಲ ನಾಯ್ಕ್ ಮನವಿ ನೀಡಿ ಒತ್ತಾಯಿಸಿದರು.
ಅಂಕೋಲಾ ತಾಲ್ಲೂಕಿನ ಶಿರೂರು ಗುಡ್ಡ ಕುಸಿತದಿಂದ ಬಳಸಿಕೊಳ್ಳುತ್ತಿರುವ ಅಗಸೂರು-ಶಿರಗುಂಜಿ-ಕೊಡ್ಸಣಿ ಮಾರ್ಗ ಹಾಗೂ ಹಿಲ್ಲೂರು-ಮಾದನಗೇರಿ ರಸ್ತೆ ದುರಸ್ಥಿ ಮಾಡಬೇಕು.ಬೃಹತ್ ವಾಹನಗಳ ಓಡಾಟದಿಂದ ಹದಗೆಟ್ಟಿವೆ. ದೊಡ್ಡ ದೊಡ್ಡ ಹೊಂಡಗಳು ಬಿದ್ದು ಸಾರ್ವಜನಿಕರ ಓಡಾಟಕ್ಕೂ ತೊಂದರೆಯಾಗುತ್ತಿದೆ. ಬೃಹತ್ ವಾಹನಗಳ ಓಡಾಟದಿಂದಲೇ ರಸ್ತೆ ಸಂಪೂರ್ಣ ಹಾಳಾಗಿವೆ. ಆದಕಾರಣ ಅಂಕೋಲಾ ತಾಲ್ಲೂಕಿನ ಕೊಡ್ಸಣಿ ರಸ್ತೆ ಹಾಗೂ ಗೋಕರ್ಣ ವಡ್ಡಿ ರಸ್ತೆಗಳನ್ನು ಪ್ರಕೃತಿ ವಿಕೋಪದಿಂದ ಹಾನಿಯಾದ ರಸ್ತೆ ಎಂದು ಪರಿಗಣಿಸಿ ಸರ್ವ ಋತು ರಸ್ತೆಯನ್ನಾಗಿ ಮಾಡಲು ಕ್ರಮ ಕೈಗೊಳ್ಳುವಂತೆ ವಿನಂತಿಸಿದರು.
ಸಾರ್ವಜನಿಕರು ಆಸ್ತಿ ನೋಂದಣಿ ಹಾಗೂ ದಾಖಲಾತಿಗಾಗಿ ಕಾರವಾರ ತಹಶೀಲ್ದಾರ ಕಾರ್ಯಾಲಯ ಹಾಗೂ ನೋಂದಣಾಧಿಕಾರಿ ಕಚೇರಿಗೆ ತೆರಳುತ್ತಾರೆ. ಈ ಕಟ್ಟಡಗಳು ಹಳೆಯದಾಗಿದ್ದು, ಶಿಥಿಲಾವಸ್ಥೆಯಲ್ಲಿದೆ. ಮಳೆಗಾದಲ್ಲಿ ಮೇಲ್ಚಾವಣಿಯ ಸೋರಿಕೆಯಿಂದ ಅಧಿಕಾರಿಗಳಿಗೂ ಕಾರ್ಯನಿರ್ವಹಿಸಲು ಅಡಚಣೆಯಾಗುತ್ತಿದೆ. ಅಲ್ಲದೆ ನಿತ್ಯ ನೂರಾರು ಜನರು ಕಾರ್ಯ ನಿಮಿತ್ತ ಕಚೇರಿಗಳಿಗೆ ಆಗಮಿಸುತ್ತಿರುತ್ತಾರೆ. ಅಗತ್ಯ ದಾಖಲಾತಿಗಾಗಿ ನಿತ್ಯ ಜನರ ಓಡಾಟ ಇರುತ್ತದೆ. ಹಾಗೂ ಹಿರಿಯ ನಾಗರಿಕರು, ಅಂಗವಿಕಲರು ಮೆಟ್ಟಿಲು ಏರುವುದಕ್ಕೆ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಆದಕಾರಣ ನೂತನವಾಗಿ ನಿರ್ಮಾಣಗೊಂಡಿರುವ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣಕ್ಕೆ ಸ್ಥಳಾಂತರಿಸಬೇಕು.ಅಲ್ಲದೇ, ಕಾರವಾರದ ಗಾಂಧಿ ಮಾರುಕಟ್ಟೆಯಲ್ಲಿ ಮಳಿಗೆಗಳನ್ನು ನಿರ್ಮಿಸಬೇಕು ಹಳೆಯ ವ್ಯಾಪಾರಿಗಳಿಗೆ ಅಲ್ಲಿ ಅವಕಾಶಗಳನ್ನು ಕಳ್ಪಿಸಬೇಕು ಎಂದು ವಿವರಿಸಿದರು.
ಪರಿಹಾರವನ್ನು ಹೆಚ್ಚಿಸಿ:
ಪ್ರವಾಹದಿಂದ ನೀರು ನುಗ್ಗಿದ ಮನೆಗಳಿಗೆ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ 10 ಸಾವಿರ ಪರಿಹಾರ ನೀಡಲಾಗುತ್ತಿತ್ತು. ಈಗ ರಾಜ್ಯ ಸರ್ಕಾರ 5 ಸಾವಿರ ನೀಡುತ್ತಿದೆ. ಇದನ್ನು 10 ಸಾವಿರಕ್ಕೆ ಏರಿಸಬೇಕು. ಉಳುವರೆಯಲ್ಲಿ ಮನೆ ಹಾನಿಯಾಗಿದೆ ಸಾವು ಸಂಭವಿಸಿದೆ. ಮನೆ ಕಳೆದುಕೊಂಡವರಿಗೆ ನಿವೇಶನ ಗುರುತಿಸಿ ಮನೆ ನಿರ್ಮಿಸಿ ಕೊಡಬೇಕು ಎಂದು ಮನವಿ ನೀಡಿ ಒತ್ತಾಯಿಸಿದರು.