ಭಟ್ಕಳ: ಒಂದು ದಶಕದಿಂದ ಭಟ್ಕಳದ ಲ್ಲಿ ಬೀಡು ಬಿಟ್ಟಿರುವ ಸರ್ಕಾರಿ ನೌಕರರನ್ನು ವರ್ಗಾಯಿಸಿ ಎಂದು ಆಗ್ರಹಿಸಿ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮಾಹಿತಿ ಹಕ್ಕು ಕಾಯ್ದೆ ಸಾಮಾಜಿಕ ಕಾರ್ಯಕರ್ತರ ವೇದಿಕೆ ಜಿಲ್ಲಾ ಅಧ್ಯಕ್ಷ ಶಂಕರ ನಾಯ್ಕ ನೇತೃತ್ವದಲ್ಲಿ ಗುರುವಾರ ಮನವಿ ನೀಡಲಾಯಿತು. ಅಪರ ಜಿಲ್ಲಾಧಿಕಾರಿ ಮನವಿ ಸ್ವೀಕರಿಸಿದರು. ಈ ವೇಳೆ ಮಾತನಾಡಿದ ಶಂಕರ್ ನಾಯ್ಕ ಭಟ್ಕಳದ ಸಹಾಯಕ ಕಮಿಷನರ್ ಕಚೇರಿ ಹಾಗೂ
ತಹಶೀಲ್ದಾರ ಕಚೇರಿಯಲ್ಲಿ ನಿಯಮಬಾಹೀರವಾಗಿ ಹಲವು ವರ್ಷದಿಂದ ಸರ್ಕಾರಿ ನೌಕರರು ಬೀಡುಬಿಟ್ಟಿದ್ದಾರೆ. ಇಂತಹ ನೌಕರರಿಂದ ಆಡಳಿತ ಹದಗೆಟ್ಟಿದೆ ಎಂದು ರಾಜ್ಯ ಮಾಹಿತಿ ಹಕ್ಕು ಸಾಮಾಜಿಕ ಕಾರ್ಯಕರ್ತ ರ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಶಂಕರ ನಾಯ್ಕ ವಿವರಿಸಿದರು. ದಶಕಕ್ಕೂ ಹೆಚ್ಚು ವರ್ಷ ಗಳಿಂದ ಇರುವ ಸಿಬ್ಬಂದಿ ವರ್ಗಾಯಿಸಿ ಎಂದು ಆಗ್ರಹಿಸಿದರು.
ನಂತರ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆ.ಸಿ.ಎಸ್.ಆರ್. ನಿಯಮದ ಪ್ರಕಾರ ಒಂದೇ ಸ್ಥಳದಲ್ಲಿ ಹತ್ತು ವರ್ಷ ಮೇಲ್ಪಟ್ಟು ಕೆಲಸ ಮಾಡಲು ಅವಕಾಶ ಇಲ್ಲ. ಆದರೂ ಕೆಲವರು ನಿಯಮಕ್ಕೆ ವಿರುದ್ಧವಾಗಿ ಸರ್ಕಾರಿ ನೌಕರರು ಮುಂದುವರೆದಿದ್ದಾರೆ. ಈ ಕಾರಣದಿಂದ ಭ್ರಷ್ಟಾಚಾರ ವ್ಯಾಪಕವಾಗಿದೆ ಎಂದು ದೂರಿದರು. ಅಲ್ಲದೆ ಹಲವು ನೌಕರರು ಸಾರ್ವಜನಿಕರಿಗೆ ಕಿರುಕುಳ ಕೊಡುತ್ತಿದ್ದಾರೆ .
ತಹಶೀಲ್ದಾರ್ ಕಚೇರಿಯಿಂದ ಉಪವಿಭಾಗಾಧಿಕಾರಿ ಕಚೇರಿಗೆ , ಉಪ ವಿಭಾಗಾಧಿಕಾರಿ ಕಚೇರಿಯಿಂದ ತಹಶಿಲ್ದಾರರ ಕಚೇರಿಗೆ ವರ್ಗಾವಣೆ ನಾಟಕ ನಡೆದಿದೆ. ಇದನ್ನೇ ಬೇರೆ ಸ್ಥಳ ಎಂದು ಸರ್ಕಾರಕ್ಕೆ ನೆಪ ಹೇಳಿ, ಬದಲಾವಣೆ ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಸಚಿವರಿಗೆ, ಜಿಲ್ಲಾಧಿಕಾರಿಗೆ ದೂರು ನೀಡಿದ್ದರೂ ಕ್ರಮವಾಗಿಲ್ಲ ಎಂದರು.
ಸರ್ಕಾರದ ನಿಯಮದ ಪ್ರಕಾರ ಹತ್ತು ವರ್ಷ ಒಂದೇ ಕಡೆ ಇರುವ ನೌಕರರನ್ನು ಪಕ್ಕದ ತಾಲೂಕಿಗೆ ವರ್ಗಾವಣೆ ಮಾಡಬೇಕು. ಹಾಗೆ ಮಾಡದಿದ್ದಲ್ಲಿ ಇದೇ ಸೆ.26 ರಂದು ಭಟ್ಕಳ ಆಡಳಿತ ಸೌಧದ ಎದುರು ಅಹೋರಾತ್ರಿ ಧರಣಿ ನಡೆಸಲಾಗುವುದು ಎಂದರು. ಪತ್ರಿಕಾಗೋಷ್ಠಿ ಯಲ್ಲಿ ಭಟ್ಕಳ ತಾಲೂಕ ಅಧ್ಯಕ್ಷ ನಾಗೇಂದ್ರ ನಾಯ್ಕ,
ಪ್ರಧಾನ ಕಾರ್ಯದರ್ಶಿ ನಾಗೇಶ ನಾಯ್ಕ ಹಾಗೂ ಮುಂತಾದವರು ಉಪಸ್ಥಿತರಿದ್ದರು.