ಭಟ್ಕಳ: ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನ, ಸಾಮಾಜಿಕ ಜಾಲತಾಣಗಳನ್ನು ಸರಿಯಾಗಿ ಬಳಸಿಕೊಳ್ಳಿ. ಇದರಿಂದ ಎಷ್ಟು ಉಪಯೋಗವಿದೆಯೊ ಅಷ್ಟೆ ಹಾನಿಯೂ ಇದ್ದು ಸದಾ ಎಚ್ಚರಿಕೆಯಿಂದ ಇರಬೇಕು ಎಂದು ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ನಾರಾಯಣ ಎಂ. ಹೇಳಿದರು.ಅವರು ಗುರುವಾರ ಭಟ್ಕಳದ ಶ್ರೀಗುರು ಸುಧೀಂದ್ರ ಕಾಲೇಜಿನಲ್ಲಿ ಭಟ್ಕಳ ಉಪವಿಭಾಗದ ಪೊಲೀಸ್ ಠಾಣೆ ಸಹಯೋಗದಲ್ಲಿ ನಡೆದ ಸೈಬರ್ ಕ್ರೈಂ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಕಾರ್ಯಕ್ರಮವನ್ನು ಸೈಬರ್ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಉದ್ಘಾಟನೆ ಮಾಡಿದರು.
ಇತ್ತೀಚಿನ ದಿನಗಳಲ್ಲಿ ಎಲ್ಲಿ ನೋಡಿದರು ಬರ್ಬರ ಹತ್ಯೆ, ಮಹಿಳೆಯರ ಮೇಲಿನ ದೌರ್ಜನ್ಯ, ಚಾಕುವಿನಿಂದ ಇರಿತ, ಸಣ್ಣ ವಿಷಯಕ್ಕೂ ಕೊಲೆಗಳು ಸೇರಿದಂತೆ ಹಿಂಸೆ ನೀಡುವ ಪ್ರಕರಣಗಳು ಹೆಚ್ಚಾಗುತ್ತಿವೆ. ಅಮಲು ಪದಾರ್ಥ ಸೇವೆನೆ, ಸಿನೆಮಾ, ಒಟಿಟಿಯಲ್ಲಿ ತೋರಿಸುವ ಜಗತ್ತು ನಿಜವಾದುದಲ್ಲ. ನಾವು ಬದುಕುತ್ತಿರುವ ಪ್ರಪಂಚವೆ ಸತ್ಯ. ಅಂತಹ ದೃಶ್ಯಗಳನ್ನು ನೋಡಿ ಪ್ರೇರಪಣೆಗೊಂಡು ದೌರ್ಜನ್ಯ ನಡೆಸಿದರೆ ಶಿಕ್ಷೆ ಅನುಭವಿಸುವದು ಖಚಿತ. ಅಂತವರನ್ನು ಮಟ್ಟ ಹಾಕಲು ಪೊಲೀಸ್ ಇಲಾಖೆ ಸದಾ ಕಣ್ಗಾವಲು ಇಟ್ಟಿದೆ. ವಿದ್ಯಾರ್ಥಿಗಳು ಜಾಗರೂಕರಾಗಿದ್ದು, ಶಿಕ್ಷಣ ನೀಡಿದ ವಿದ್ಯಾ ಸಂಸ್ಥೆ, ಹುಟ್ಟಿದ ಊರು, ಪಾಲಕರಿಗೆ ಗೌರವ ತರುವ ಕೆಲಸವಾಗಬೇಕು ಎಂದು ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಸಂದರ್ಭದಲ್ಲಿ ಡಿವೈಎಸ್ಪಿ ಮಹೇಶ ಎಂ.ಕೆ, ಪಿಐ ಗೋಪಿಕೃಷ್ಣ, ಭಟ್ಕಳ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಸುರೇಶ ನಾಯಕ, ಟ್ರಸ್ಟಿ ರಾಜೇಶ ನಾಯಕ , ಪ್ರಾಂಶುಪಾಲ ಶ್ರೀನಾಥ ಪೈ ಉಪಸ್ಥಿತರಿದ್ದರು.