ಭಟ್ಕಳ: “ಭಾರತೀಯ ಸಂವಿಧಾನವು ಎಲ್ಲರಿಗೂ ದಾರಿದೀಪವಾಗಿದೆ” ಎಂದು ಭಟ್ಕಳ ಉಪವಿಭಾಗದ ಸಹಾಯಕ ಆಯುಕ್ತೆ ಡಾ. ನಯನಾ ಹೇಳಿದರು. ಅವರು ಮಂಗಳವಾರ ಸಂಜೆ ನಗರದ ಶಮ್ಸುದ್ದೀನ್ ವೃತ್ತದಲ್ಲಿ ಸದ್ಭಾವನಾ ಮಂಚ್ ಆಯೋಜಿಸಿದ್ದ “ಸಂವಿಧಾನ ಪೀಠಿಕೆ ಓದು” ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
“ನ. 26, 1949ರಲ್ಲಿ ಅಳವಡಿಸಿಕೊಂಡ ಈ ಸಂವಿಧಾನದ ಆದರ್ಶಗಳಿಗೆ ಅನುಗುಣವಾಗಿ ಜೀವನ ರೂಪಿಸಿಕೊಳ್ಳಲು ನಾವು ಪ್ರಾಮಾಣಿಕ ಪ್ರಯತ್ನ ಮಾಡಬೇಕು” ಎಂದು ಅವರು ಕರೆ ನೀಡಿದರು.
ಸದ್ಭಾವನಾ ಮಂಚ್ ಅಧ್ಯಕ್ಷ ಸತೀಶ್ ಕುಮಾರ್ ನಾಯ್ಕ ಮಾತನಾಡಿ, “ನಮ್ಮ ಸಂವಿಧಾನದ ರಚನೆಗೆ ದೊಡ್ಡ ಪರಿಶ್ರಮವಿದೆ. ಜಾತಿ, ಮತ, ಆಚಾರ-ವಿಚಾರಗಳನ್ನು ಮೀರಿ ಸಾಮಾಜಿಕ ನ್ಯಾಯ, ಸಮಾನತೆ, ಮತ್ತು ಬಾಂಧವ್ಯವನ್ನು ಪ್ರತಿಪಾದಿಸುವ ಸಂವಿಧಾನ ನಮ್ಮ ಗೌರವವಾಗಿದೆ. ಆದರೆ ದ್ವೇಷದ ರಾಜಕಾರಣದಿಂದಾಗಿ ಸಂವಿಧಾನವನ್ನು ಕೀಳಾಗಿ ಕಾಣುವ ಮನೋಭಾವ ಬೆಳೆಸುತ್ತಿರುವುದು ವಿಷಾದನೀಯ. ಈ ರೀತಿ ಕರ್ತವ್ಯನಿಷ್ಠೆಯನ್ನು ಕಳೆದುಕೊಳ್ಳುವವರಿಂದ ಸಂವಿಧಾನದ ಶ್ರೇಷ್ಠತೆಯನ್ನು ಹಾಳು ಮಾಡಲು ಸಾಧ್ಯವಿಲ್ಲ” ಎಂದು ಅಭಿಪ್ರಾಯಪಟ್ಟರು.
ಅಂಜುಮನ್ ಪದವಿ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ. ಆರ್.ಎಸ್. ನಾಯ್ಕ, “ಸಂವಿಧಾನವು ನಮ್ಮ ಹಕ್ಕುಗಳನ್ನು ಕಾಪಾಡುತ್ತದೆ ಮತ್ತು ಇತರರ ಹಕ್ಕುಗಳನ್ನು ಗೌರವಿಸಲು ಕಲಿಸುತ್ತದೆ. ಗೌರವಯುತ ಜೀವನಕ್ಕಾಗಿ ಮಾರ್ಗದರ್ಶಕವಾಗಿ ಕಾರ್ಯನಿರ್ವಹಿಸುವ ಈ ಸಂವಿಧಾನವನ್ನು ಪ್ರತಿಯೊಬ್ಬರೂ ಗಂಭೀರವಾಗಿ ಅಧ್ಯಯನ ಮಾಡಬೇಕು” ಎಂದು ಹೇಳಿದರು.ಸದ್ಭಾವನಾ ಮಂಚ್ ಕಾರ್ಯದರ್ಶಿ ಎಂ.ಆರ್. ಮಾನ್ವಿ ಮಾತನಾಡಿ, “ನ್ಯಾಯ, ಸಮಾನತೆ, ಸ್ವಾತಂತ್ರ್ಯ ಮತ್ತು ಬಾಂಧವ್ಯ ಎಂಬ ನಾಲ್ಕು ಮೂಲಭೂತ ಮೌಲ್ಯಗಳನ್ನು ಪ್ರತಿಪಾದಿಸುವ ಸಂವಿಧಾನವು ಸಾಮಾಜಿಕ, ಆರ್ಥಿಕ, ಹಾಗೂ ರಾಜಕೀಯ ನ್ಯಾಯವನ್ನು ಪ್ರತಿಯೊಬ್ಬ ನಾಗರಿಕನಿಗೆ ಒದಗಿಸಲು ಸಂಕಲ್ಪಗೊಂಡಿದೆ” ಇಂದು ಕೇವಲ ಸಂವಿಧಾನದ ಪ್ರಸ್ತಾವನೆ ಓದುವುದು ಮಾತ್ರವಲ್ಲ, ಅದರ ಆಶಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಸಂಕಲ್ಪ ಮಾಡಬೇಕು, ಎಂದು ಹೇಳಿದರು.ಕಾರ್ಮಿಕ ಮುಖಂಡ ರೇವಣಕರ್, “ಡಾ. ಬಾಬಾ ಸಾಹೇಬ ಅಂಬೇಡ್ಕರ್ ರಚಿಸಿದ ಸಂವಿಧಾನವು ಎಲ್ಲರ ಹಕ್ಕುಗಳನ್ನು ಕಾಪಾಡುತ್ತದೆ. ಅದರ ಆಶಯಗಳನ್ನು ಅನುಸರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ” ಎಂದು ಹೇಳುವ ಮೂಲಕ ಸಂವಿಧಾನದ ಮಹತ್ವವನ್ನು ವಿವರಿಸಿದರು.
- ಕಾರ್ಯಕ್ರಮದಲ್ಲಿ ಅಂಜುಮನ್ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಗಣೇಶ ಯಾಜಿ, ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳ ಶಾಖೆಯ ಅಧ್ಯಕ್ಷ ಮೌಲಾನ ಸೈಯ್ಯದ್ ಝುಬೇರ್ ಎಸ್.ಎಂ., ಮುಜಾಹಿದ್ ಮುಸ್ತಫಾ, ಮೌಲಾನ ಜಾಫರ್ ನದ್ವಿ ಹಾಗೂ ಅನೇಕ ವಿದ್ಯಾರ್ಥಿಗಳು ಭಾಗವಹಿಸಿದರು.
ಈ ಕಾರ್ಯಕ್ರಮದಲ್ಲಿ ಸಂವಿಧಾನದ ಪೀಠಿಕೆಯನ್ನು ಓದಿ ಅದನ್ನು ಅರ್ಥೈಸುವ ಮೂಲಕ ಅದರ ಆಶಯಗಳನ್ನು ಅಳವಡಿಸಿಕೊಳ್ಳುವ ಸಂಕಲ್ಪ ಮಾಡಲಾಯಿತು.